ಬೆಂಗಳೂರಿನಲ್ಲಿ ಟೆನಿಸ್ ಹಬ್ಬಕ್ಕೆ ಮುಹೂರ್ತ ಫಿಕ್ಸ್: ಡಿಸೆಂಬರ್ 17ರಿಂದ WTL ಸಂಭ್ರಮ

ವರ್ಲ್ಡ್ ಟೆನಿಸ್ ಲೀಗ್‌ನ 5ನೇ ಆವೃತ್ತಿ ಡಿಸೆಂಬರ್ 17-20ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಟೆನಿಸ್ ತಾರೆಗಳ ಜೊತೆಗೆ ಭಾರತದ ಆಟಗಾರರು ಭಾಗವಹಿಸಲಿದ್ದಾರೆ. ಭಾರತೀಯ ಪ್ರತಿಭೆಗಳಿಗೆ ಜಾಗತಿಕ ವೇದಿಕೆ ಕಲ್ಪಿಸುವ ಈ ಟೂರ್ನಿಗೆ ಸಹ-ಸಂಸ್ಥಾಪಕ ಮಹೇಶ್ ಭೂಪತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೆನಿಸ್ ಅಭಿಮಾನಿಗಳಿಗೆ ಇದೊಂದು ದೊಡ್ಡ ಹಬ್ಬ.

ಬೆಂಗಳೂರಿನಲ್ಲಿ ಟೆನಿಸ್ ಹಬ್ಬಕ್ಕೆ ಮುಹೂರ್ತ ಫಿಕ್ಸ್: ಡಿಸೆಂಬರ್ 17ರಿಂದ WTL ಸಂಭ್ರಮ
Wtl Bengaluru

Updated on: Nov 12, 2026 | 12:08 PM

ಭಾರತದ ಪ್ರಮುಖ ಟೆನಿಸ್ ಟೂರ್ನಿಗಳಲ್ಲಿ ಒಂದಾಗಿರುವ ವರ್ಲ್ಡ್ ಟೆನಿಸ್ ಲೀಗ್ (WTL) ಐದನೇ ಆವೃತ್ತಿಗೆ ಸಜ್ಜಾಗಿದೆ. ವಿಶ್ವದ ಖ್ಯಾತ ಟೆನಿಸ್ ಆಟಗಾರರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶವನ್ನು ಅಭಿಮಾನಿಗಳಿಗೆ ಕಲ್ಪಿಸಿರುವ ಈ ಟೂರ್ನಿ, ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಡಿಸೆಂಬರ್ 17ರಿಂದ 20ರವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನ ಕೆಎಸ್‌ಎಲ್‌ಟಿಎ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಸಂಸ್ಥೆ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಬಾರಿಯೂ ಅಂತರರಾಷ್ಟ್ರೀಯ ಮಟ್ಟದ ಸ್ಟಾರ್ ಆಟಗಾರರ ಜೊತೆಗೆ ಭಾರತದ ಪ್ರಮುಖ ಟೆನಿಸ್ ಆಟಗಾರರು ಅಂಕಣಕ್ಕಿಳಿಯಲಿದ್ದಾರೆ.

ವಿಶ್ವದ ಸ್ಟಾರ್ ಆಟಗಾರರ ಮೇಲೆ ಅಭಿಮಾನಿಗಳ ಕಣ್ಣು

ಕಳೆದ ನಾಲ್ಕು ಆವೃತ್ತಿಗಳಲ್ಲಿ ವಿಶ್ವದ ಹಲವು ಖ್ಯಾತ ಟೆನಿಸ್ ಆಟಗಾರರು ವರ್ಲ್ಡ್ ಟೆನಿಸ್ ಲೀಗ್‌ನಲ್ಲಿ ಭಾಗವಹಿಸಿದ್ದಾರೆ. ಆಟಗಾರರ ಗುಣಮಟ್ಟ ಹಾಗೂ ಮೈದಾನದಲ್ಲಿನ ರೋಚಕ ಪ್ರದರ್ಶನದಿಂದಾಗಿ ಈ ಟೂರ್ನಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದೇ ಯಶಸ್ಸನ್ನು ಮುಂದುವರಿಸುವ ಉದ್ದೇಶದಿಂದ ಐದನೇ ಆವೃತ್ತಿಯಲ್ಲೂ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಆಟಗಾರರು ಹಾಗೂ ಭಾರತದ ಉದಯೋನ್ಮುಖ ಪ್ರತಿಭೆಗಳು ಒಂದೇ ಅಂಗಳದಲ್ಲಿ ಸೆಣಸಲಿದ್ದಾರೆ.

Loading...

ಕಳೆದ ಆವೃತ್ತಿಯಲ್ಲಿ ಭಾಗವಹಿಸಿದ್ದ ಪೌಲಾ ಬಡೋಸಾ, ಯೂಕಿ ಭಾಂಬ್ರಿ, ಸುಮಿತ್ ನಾಗಲ್, ದಕ್ಷಿಣೇಶ್ವರ್ ಸುರೇಶ್, ಮಾಯಾ ರಾಜೇಶ್ವರನ್ ರೇವತಿ ಹಾಗೂ ಶ್ರೀವಲ್ಲಿ ಭಾಮಿದಿಪಾಟಿ ಸೇರಿದಂತೆ ಹಲವು ಆಟಗಾರರು ಈ ಬಾರಿಯೂ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೂರ್ನಿ ಬಗ್ಗೆ ಮಹೇಶ್ ಭೂಪತಿ ಹೇಳಿದ್ದೇನು?

ವರ್ಲ್ಡ್ ಟೆನಿಸ್ ಲೀಗ್‌ನ ಸಹ-ಸಂಸ್ಥಾಪಕ ಹಾಗೂ ಭಾರತದ ಮಾಜಿ ಟೆನಿಸ್ ತಾರೆ ಮಹೇಶ್ ಭೂಪತಿ ಮಾತನಾಡಿ, ‘ಕಳೆದ ಆವೃತ್ತಿಯಲ್ಲಿ ಅಂತರರಾಷ್ಟ್ರೀಯ ಆಟಗಾರರು ಮತ್ತು ಭಾರತದ ಪ್ರತಿಭಾವಂತ ಆಟಗಾರರು ಒಂದೇ ವೇದಿಕೆಯಲ್ಲಿ ಆಡಿದ್ದು, ಅಭಿಮಾನಿಗಳಿಗೆ ಉತ್ತಮ ಮಟ್ಟದ ಟೆನಿಸ್ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಅಭಿಮಾನಿಗಳಿಂದ ಸಿಕ್ಕ ಪ್ರತಿಕ್ರಿಯೆ ಹಾಗೂ ಟೂರ್ನಿಯ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ನಮಗೆ ಮತ್ತಷ್ಟು ಉತ್ಸಾಹ ನೀಡಿದೆ. ಐದನೇ ಆವೃತ್ತಿಗೆ ಕಾಲಿಡುತ್ತಿರುವ ನಾವು, ಹಿಂದಿನ ಯಶಸ್ಸನ್ನು ಮುಂದುವರಿಸುವುದರ ಜೊತೆಗೆ ಹೊಸ ಅಭಿಮಾನಿಗಳನ್ನು ತಲುಪಲು ಮತ್ತು ಪ್ರತಿ ವರ್ಷ ಟೂರ್ನಿಯನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

ಟೂರ್ನಿ ಆಯೋಜನೆಗೆ ಸಂತಸ: ಹೇಮಾಲಿ ಶರ್ಮಾ

ವರ್ಲ್ಡ್ ಟೆನಿಸ್ ಲೀಗ್‌ನ ಸಹ-ಸಂಸ್ಥಾಪಕಿ ಹೇಮಾಲಿ ಶರ್ಮಾ ಮಾತನಾಡಿ, ‘ವರ್ಲ್ಡ್ ಟೆನಿಸ್ ಲೀಗ್ ಅನ್ನು ಮತ್ತೊಮ್ಮೆ ಬೆಂಗಳೂರಿಗೆ ಕರೆತರುತ್ತಿರುವುದು ಸಂತಸದ ವಿಚಾರ. ಬೆಂಗಳೂರಿನಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹವಿದೆ. ಅದರಲ್ಲೂ ಟೆನಿಸ್ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಟೂರ್ನಿ ಆಯೋಜಿಸಲು ನಗರ ಸೂಕ್ತ ತಾಣವಾಗಿದೆ. ಈ ಬಾರಿಯೂ ವಿಶ್ವದ ಅತ್ಯುತ್ತಮ ಆಟಗಾರರ ಜೊತೆಗೆ ಭಾರತದ ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳು ಭಾಗವಹಿಸಲಿದ್ದಾರೆ. ಅಭಿಮಾನಿಗಳಿಗೆ ವಿಶೇಷ ಟೆನಿಸ್ ಅನುಭವ ನೀಡುವುದರ ಜೊತೆಗೆ, ಭಾರತೀಯ ಆಟಗಾರರು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆ ತೋರಿಸಲು ಉತ್ತಮ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ’ ಎಂದು ತಿಳಿಸಿದರು.

ಭಾರತೀಯ ಟೆನಿಸ್ ಪ್ರತಿಭೆಗಳಿಗೆ ಜಾಗತಿಕ ವೇದಿಕೆ

ವಿಶ್ವದಾದ್ಯಂತ ಟೆನಿಸ್ ಕ್ರೀಡೆಗೆ ಜನಪ್ರಿಯತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಭಾರತೀಯ ಅಭಿಮಾನಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಟೆನಿಸ್ ಪಂದ್ಯಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ವರ್ಲ್ಡ್ ಟೆನಿಸ್ ಲೀಗ್ ಒದಗಿಸುತ್ತಿದೆ. ಅಷ್ಟೇ ಅಲ್ಲದೆ, ಭಾರತದ ಯುವ ಆಟಗಾರರಿಗೆ ವಿಶ್ವದ ಖ್ಯಾತ ಆಟಗಾರರ ಜೊತೆ ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಉತ್ತಮ ವೇದಿಕೆಯಾಗಿದೆ. ಐದನೇ ಆವೃತ್ತಿಯಲ್ಲಿ ಭಾಗವಹಿಸಲಿರುವ ಸಂಪೂರ್ಣ ಆಟಗಾರರ ಪಟ್ಟಿ ಹಾಗೂ ತಂಡಗಳ ವಿವರಗಳನ್ನು ಆಯೋಜಕರು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದಾರೆ. ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಟೆನಿಸ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Thu, 12 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us