
ಚೀನಾದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಕಾರ್ಪೊರೇಟ್ ವಲಯದ ಕಠಿಣ ಕೆಲಸದ ಒತ್ತಡಕ್ಕೆ (Corporate Burnout) ಅಲ್ಲಿನ ಯುವ ಪೀಳಿಗೆ ಎಷ್ಟು ಬೇಸತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಂಗೋಲಿಯಾದ (Inner Mongolia) ರೈತನೊಬ್ಬ ತನ್ನ ಫಾರ್ಮ್‌ನಲ್ಲಿ ಕುರಿ ಕಾಯಲು ಇಬ್ಬರು ನೌಕರರು ಬೇಕಾಗಿದ್ದಾರೆ ಎಂದು ನೀಡಿದ ಸಣ್ಣದೊಂದು ಜಾಹೀರಾತು ಇಡೀ ಚೀನಾದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಐಟಿ ಉದ್ಯೋಗಿಗಳು ಮತ್ತು ಪದವೀಧರರು ಈ ಕೆಲಸಕ್ಕಾಗಿ ಮುಗಿಬಿದ್ದಿರುವ ಸತ್ಯ ಹೊರಬಿದ್ದಿದೆ.
ಮಂಗೋಲಿಯನ್ ಗಡಿಯ ಸಮೀಪವಿರುವ ಕ್ಸಿಲಿನ್‌ಹೋಟ್ ನಗರದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಫಾರ್ಮ್ ಮಾಲೀಕ ‘ಜುವೊ ಕ್ಸಿಯಾವೊಯಾಂಗ್’ ಎಂಬುವವರು ಏಪ್ರಿಲ್ ಕೊನೆಯಲ್ಲಿ ಚೀನಾದ ಪ್ರಮುಖ ಸಾಮಾಜಿಕ ಜಾಲತಾಣವಾದ ‘ವೈಬೋ’ (Weibo) ನಲ್ಲಿ ಒಂದು ಸರಳ ಜಾಹೀರಾತು ಪೋಸ್ಟ್ ಮಾಡಿದ್ದರು. ಹಸಿರು ಹುಲ್ಲುಗಾವಲಿನಲ್ಲಿ ಕುರಿಗಳು ಓಡಾಡುತ್ತಿರುವ ವೀಡಿಯೊ ಹೊಂದಿದ್ದ ಈ ಪೋಸ್ಟ್ ಚೀನಾದಲ್ಲಿ ಬರೋಬ್ಬರಿ 5.9 ಕೋಟಿಗೂ ಹೆಚ್ಚು ವೀಕ್ಷಣೆ (Views) ಪಡೆದುಕೊಂಡಿದೆ.
ಜುವೊ ಅವರ 2,000 ಹೆಕ್ಟೇರ್ ವಿಸ್ತೀರ್ಣದ ವಿಶಾಲವಾದ ಹುಲ್ಲುಗಾವಲಿನಲ್ಲಿರುವ 3,000 ಕುರಿಗಳನ್ನು ಕಾಯಲು ಮೇಲ್ನೋಟಕ್ಕೆ ದಂಪತಿಗಳಾಗಿರುವ ಇಬ್ಬರು ಕುರುಬರು ಬೇಕಾಗಿದ್ದರು. ಬೇಸಿಗೆಯಲ್ಲಿ ಕುರಿಗಳನ್ನು ಮೇಯಿಸಲು ಹೊರಗೆ ಕರೆದೊಯ್ಯುವುದು ಮತ್ತು ಚಳಿಗಾಲದಲ್ಲಿ ತಾಪಮಾನವು ಮೈನಸ್ 30 ಡಿಗ್ರಿ (-30°C) ಗಿಂತ ಕೆಳಗೆ ಕುಸಿದಾಗ ಅವುಗಳಿಗೆ ಶೆಡ್‌ನಲ್ಲೇ ಆಹಾರ ನೀಡಿ ಸ್ವಚ್ಛಗೊಳಿಸುವುದು ಇವರ ಕೆಲಸವಾಗಿತ್ತು.
ಈ ಕೆಲಸಕ್ಕೆ ಅವರು ತಿಂಗಳಿಗೆ ತಲಾ 8,000 ಯುವಾನ್ (ಸುಮಾರು ₹95,000) ಸಂಬಳದ ಜೊತೆಗೆ ಉಚಿತ ವಸತಿ ಮತ್ತು ದಿನಸಿ ಸಾಮಗ್ರಿಗಳನ್ನು ನೀಡುವುದಾಗಿ ಘೋಷಿಸಿದ್ದರು. ಈ ಸಂಬಳವು ಚೀನಾದ ನಗರ ಪ್ರದೇಶದ ಖಾಸಗಿ ಕಂಪನಿಗಳ ಸರಾಸರಿ ವೇತನಕ್ಕಿಂತ (6,000 ಯುವಾನ್) ಗಣನೀಯವಾಗಿ ಹೆಚ್ಚಾಗಿದೆ.
ಇದನ್ನೂ ಓದಿ: ಫೇವರಿಟ್ ಟೀಚರ್‌ಗಾಗಿ ಮನೆಯಿಂದ ಟೀ ಮಾಡಿಕೊಂಡು ತಂದ ಪುಟಾಣಿ
ಕೇವಲ ಇಬ್ಬರು ಕುರುಬರ ಹುದ್ದೆಗೆ ಜುವೊ ಅವರಿಗೆ ಬಂದಿದ್ದು ಬರೋಬ್ಬರಿ 700 ಕ್ಕೂ ಹೆಚ್ಚು ಅರ್ಜಿಗಳು. ವಿಶೇಷವೆಂದರೆ, ಅರ್ಜಿ ಸಲ್ಲಿಸಿದವರಲ್ಲಿ ಶೇಕಡಾ 10 ರಷ್ಟು ಮಂದಿ ಇತ್ತೀಚೆಗೆ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಯುವಕರಾಗಿದ್ದರೆ, ಇನ್ನುಳಿದವರು ಶಾಂಘೈ ಮತ್ತು ಚಾಂಗ್‌ಕಿಂಗ್‌ನಂತಹ ಮೆಗಾಸಿಟಿಗಳ ಆಫೀಸ್ ರಾಜಕೀಯ ಹಾಗೂ ಐಟಿ ಕಂಪನಿಗಳ ಒತ್ತಡಕ್ಕೆ ಬೇಸತ್ತ ಬಿಳಿ ಕಾಲರ್ (White-collar) ಉದ್ಯೋಗಿಗಳು ಮತ್ತು ಫ್ಯಾಕ್ಟರಿ ಕಾರ್ಮಿಕರಾಗಿದ್ದಾರೆ.
“ಸಾಮಾನ್ಯ ಜನರಿಗೆ ನಗರಗಳಲ್ಲಿ ಕೆಲಸ ಸಿಗುವುದು ಎಷ್ಟು ಕಷ್ಟವಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ” ಎಂದು ಆಶ್ಚರ್ಯ ವ್ಯಕ್ತಪಡಿಸಿದ ಮಾಲೀಕ ಜುವೊ, “ಇದು ಪ್ರವಾಸೋದ್ಯಮವಲ್ಲ, ಮೈನಸ್ 30 ಡಿಗ್ರಿ ಚಳಿಯಲ್ಲಿ ದೀರ್ಘಕಾಲ ಇಲ್ಲಿ ಬದುಕುವುದು ಮುಖ್ಯ” ಎಂದು ಎಚ್ಚರಿಸಿದ್ದಾರೆ.
ಚೀನಾದ ಬಹುತೇಕ ಕಂಪನಿಗಳಲ್ಲಿ ‘996’ ಕೆಲಸದ ಸಂಸ್ಕೃತಿ ಜಾರಿಯಲ್ಲಿದೆ. ಅಂದರೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ, ವಾರದಲ್ಲಿ 6 ದಿನಗಳ ಕಾಲ ಕಡ್ಡಾಯವಾಗಿ ದುಡಿಯಬೇಕು. ಇದರಿಂದ ಬೇಸತ್ತ ಯುವಕರು ಇದರಿಂದ ತಪ್ಪಿಸಿಕೊಳ್ಳಲು ಹಂಬಲಿಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.
ಅರ್ಜಿಗಳ ಮಹಾಪೂರವೇ ಹರಿದುಬಂದರೂ, ಮಾಲೀಕ ಜುವೊ ಅವರು ನಗರದ ಯುವಕರನ್ನು ಅಥವಾ ಒಂಟಿ ವ್ಯಕ್ತಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ಹಿಂದೆ ಫಾರ್ಮ್‌ಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಎರಡು ದಂಪತಿಗಳನ್ನು (ಒಟ್ಟು 4 ಜನ) ಕೆಲಸಕ್ಕೆ ನಿಯೋಜಿಸಿಕೊಂಡಿರುವುದು ವರದಿಯಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Tue, 2 June 26