ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
R. Ashwin, Haris Rauf: ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ಹ್ಯಾರಿಸ್ ರೌಫ್ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ. ಉಭಯ ಆಟಗಾರರು ಪಕ್ಕ ಪಕ್ಕ ಕುಳಿತು ಆಟೋಗ್ರಾಫ್ ನೀಡಿದರೂ, ಯಾವುದೇ ಸಂಭಾಷಣೆ ನಡೆಸದಿರುವುದು ಉಭಯ ರಾಷ್ಟ್ರಗಳ ಕ್ರಿಕೆಟ್ ವೈಷಮ್ಯವನ್ನು ಎತ್ತಿ ತೋರಿಸುತ್ತದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಂಬಂಧಗಳಿಗೂ ತೆರೆ ಎಳೆಯಲಾಗಿದೆ. ಇದು ಕ್ರಿಕೆಟ್‌ನ ಮೇಲೂ ಪರಿಣಾಮ ಬೀಡಿದೆ. ಪಾಕಿಸ್ತಾನಿ ಕ್ರಿಕೆಟಿಗರ ಜೊತೆ ಭಾರತೀಯ ಆಟಗಾರರು ಕೈಕುಲುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಐಸಿಸಿ ಅಥವಾ ಎಸಿಸಿ ಪಂದ್ಯಾವಳಿಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾದರೂ ಉಭಯ ಆಟಗಾರರ ನಡುವೆ ಮಾತಿಲ್ಲ ಕತೆಯಿಲ್ಲ. ಹೀಗಿರುವಾಗ ಭಾರತೀಯ ಆಟಗಾರನೊಬ್ಬ, ಪಾಕಿಸ್ತಾನ್ ಆಟಗಾರನೊಂದಿಗೆ ಕಾಣಿಸಿಕೊಳ್ಳುವುದು ಅಪರೂಪದ ಘಟನೆಯಾಗಿದೆ. ಇದೀಗ ಅಂತಹದೆ ಘಟನೆಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಆರ್. ಅಶ್ವಿನ್ ಹಾಗೂ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ ರೌಫ್ ಭಾಗಿಯಾಗಿದ್ದಾರೆ.
ವಾಸ್ತವವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ರವಿಚಂದ್ರನ್ ಅಶ್ವಿನ್ ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ಪರ ಅಶ್ವಿನ್ ಆಡುತ್ತಿದ್ದು, ಈ ತಂಡದಲ್ಲಿ ಹಲವಾರು ಪಾಕಿಸ್ತಾನಿ ಕ್ರಿಕೆಟಿಗರು ಇದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹ್ಯಾರಿಸ್ ರೌಫ್ ಅವರೊಂದಿಗೆ ಆರ್. ಅಶ್ವಿನ್ ಕುಳಿತಿರುವುದನ್ನು ಕಾಣಬಹುದಾಗಿದೆ. ಇವರಿಬ್ಬರು ಅಕ್ಕಪಕ್ಕದಲ್ಲಿ ಕುಳಿತು ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ್ದಾರೆ. ಆದರೆ ಅಶ್ವಿನ್, ರೌಫ್ ಜೊತೆಗೆ ಮಾತನಾಡುವುದಾಗಲಿ ಅಥವಾ ರೌಫ್ ತೆಗೆದ ಸೆಲ್ಫಿಗೆ ಫೋಸ್ ನೀಡುವುದಾಗಲಿ ಮಾಡಿಲ್ಲ.