ಭಾರತದಲ್ಲಿ ‘ಬಿಗ್ ಬ್ಯಾಷ್ ಲೀಗ್’
Big bash league 2026 (BBL 16): ಬಿಬಿಎಲ್‌ನ ಕೆಲವು ಫ್ರಾಂಚೈಸಿಗಳನ್ನು (ತಂಡಗಳನ್ನು) ಖಾಸಗೀಕರಣಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಜಿಸಿದೆ. ಭಾರತದಲ್ಲಿ ಪಂದ್ಯ ಆಯೋಜಿಸುವ ಮೂಲಕ ಐಪಿಎಲ್ ತಂಡಗಳ ಮಾಲೀಕರು ಅಥವಾ ಭಾರತೀಯ ಉದ್ಯಮಿಗಳನ್ನು ಈ ಲೀಗ್‌ನಲ್ಲಿ ಹೂಡಿಕೆ ಮಾಡಲು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ.
ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್ ಸೀಸನ್-16ರ ಮೊದಲ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ (ಚೆಪಾಕ್) ಈ ಪಂದ್ಯಕ್ಕೆ ಅತಿಥ್ಯ ವಹಿಸುವ ಸಾಧ್ಯತೆಯಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಈಗಾಗಲೇ ಚೆನ್ನೈಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬಿಗ್ ಬ್ಯಾಷ್ ಲೀಗ್ ಪಂದ್ಯವನ್ನು ಭಾರತದಲ್ಲಿ ಆಯೋಜಿಸುತ್ತಿರುವುದೇಕೆ?
ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಕಳೆದ 15 ಸೀಸನ್ಗಳನ್ನು ಆಸ್ಟ್ರೇಲಿಯಾದಲ್ಲೇ ಆಯೋಜಿಸಿದ್ದರು. ಇದೀಗ ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ…
ಹೂಡಿಕೆದಾರರ ಸೆಳೆತ: ಬಿಬಿಎಲ್‌ನ ಕೆಲವು ಫ್ರಾಂಚೈಸಿಗಳನ್ನು (ತಂಡಗಳನ್ನು) ಖಾಸಗೀಕರಣಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಜಿಸಿದೆ. ಭಾರತದಲ್ಲಿ ಪಂದ್ಯ ಆಯೋಜಿಸುವ ಮೂಲಕ ಐಪಿಎಲ್ ತಂಡಗಳ ಮಾಲೀಕರು ಅಥವಾ ಭಾರತೀಯ ಉದ್ಯಮಿಗಳನ್ನು ಈ ಲೀಗ್‌ನಲ್ಲಿ ಹೂಡಿಕೆ ಮಾಡಲು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ.
ಮಾರುಕಟ್ಟೆ ವಿಸ್ತರಣೆ: ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿದೆ. ಇಲ್ಲಿನ ಅಪಾರ ಅಭಿಮಾನಿ ಬಳಗವನ್ನು ತಲುಪುವ ಮೂಲಕ ಲೀಗ್‌ನ ಜನಪ್ರಿಯತೆ ಮತ್ತು ಪ್ರಸಾರ ಹಕ್ಕುಗಳ ಮೌಲ್ಯವನ್ನು ಹೆಚ್ಚಿಸಲು ಆಸ್ಟ್ರೇಲಿಯಾ ಬಯಸಿದೆ.
ಜಾಗತಿಕ ಪೈಪೋಟಿ: ಪ್ರಸ್ತುತ ಸೌತ್ ಆಫ್ರಿಕಾ ಟಿ20 ಲೀಗ್ (SA20) ಮತ್ತು ಇಂಟರ್ನ್ಯಾಷನಲ್ ಲೀಗ್ ಟಿ20 (ILT20-ಯುಎಇ) ಲೀಗ್‌ಗಳು ಭಾರತೀಯ ಉದ್ಯಮಿಗಳ ಹೂಡಿಕೆಯಿಂದಾಗಿ ವೇಗವಾಗಿ ಬೆಳೆಯುತ್ತಿವೆ. ಈ ಲೀಗ್‌ಗಳಿಗೆ ಪೈಪೋಟಿ ನೀಡಲು ಮತ್ತು ಐಪಿಎಲ್ ನಂತರದ ವಿಶ್ವದ 2ನೇ ಶ್ರೇಷ್ಠ ಲೀಗ್ ಎನಿಸಿಕೊಳ್ಳಲು ಬಿಗ್ ಬ್ಯಾಷ್ ಲೀಗ್ ಹೊಸ ಪ್ರಯತ್ನಕ್ಕೆ ಕೈ ಹಾಕಲು ಮುಂದಾಗಿದೆ.
ಈಗಾಗಲೇ ಹಾಲಿ ಚಾಂಪಿಯನ್ ಪರ್ತ್ ಸ್ಕಾಚರ್ಸ್ ತಂಡವು ಭಾರತದಲ್ಲಿ ಉದ್ಘಾಟನಾ ಪಂದ್ಯವಾಡಲು ಒಪ್ಪಿಗೆ ಸೂಚಿಸಿದೆ. ಇತ್ತ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ನ ಅಧಿಕಾರಿಗಳು ಎಂ.ಎ. ಚಿದಂಬರಂ ಸ್ಟೇಡಿಯಂ (ಚೆಪಾಕ್) ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಇದಾಗ್ಯೂ ಬಿಗ್ ಬ್ಯಾಷ್ ಲೀಗ್‌ನ ಮೊದಲ ಪಂದ್ಯಕ್ಕೆ ಬಿಸಿಸಿಐ ಅನುಮತಿ ನೀಡಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಐಪಿಎಲ್ನ ಜನಪ್ರಿಯತೆ ಕುಗ್ಗ ಬಾರದೆಂಬ ಕಾರಣಕ್ಕೆ ಬಿಸಿಸಿಐ ಭಾರತೀಯ ಪುರುಷ ಆಟಗಾರರು ವಿದೇಶಿ ಲೀಗ್ಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿದೆ.
ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಬಿಗ್ ಬ್ಯಾಷ್ ಲೀಗ್ ಭಾರತದಲ್ಲೇ ಪಂದ್ಯ ಆಯೋಜಿಸಲು ಪ್ಲ್ಯಾನ್ ರೂಪಿಸುತ್ತಿದೆ. ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಲಿದ್ದಾರಾ ಎಂಬುದೇ ಈಗ ಕುತೂಹಲ.
