ಕಾಫಿನಾಡಿನಲ್ಲಿ ವರುಣನ ಅಬ್ಬರ: ಬಿರುಗಾಳಿ ಸಹಿತ ಧಾರಾಕಾರ ಮಳೆ, ಮೂಡಿಗೆರೆ ರಸ್ತೆಗಳು ಜಲಾವೃತ!
ಚಿಕ್ಕಮಗಳೂರಿನಲ್ಲಿ ಹವಾಮಾನ ದಿಢೀರ್ ಬದಲಾಗಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ, ವಿಶೇಷವಾಗಿ ಆಲ್ದೂರು ಮತ್ತು ಮೂಡಿಗೆರೆಗಳಲ್ಲಿ ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ರಸ್ತೆಗಳು ನದಿಯಂತಾಗಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕಾಫಿ ತೋಟಗಳಿಗೆ ಅನುಕೂಲವಾದರೂ, ಮರಗಳು ಉರುಳುವ ಭೀತಿ ಆವರಿಸಿದೆ.
ಚಿಕ್ಕಮಗಳೂರು, ಮಾ.28: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹವಾಮಾನ ದಿಢೀರ್ ಬದಲಾಗಿದ್ದು, ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ಮಳೆಯ ಆರ್ಭಟ ಜೋರಾಗಿದೆ. ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಾಫಿ ತೋಟಗಳಿಗೆ ಇದು ಆಸರೆಯಾದರೂ ಬಿರುಗಾಳಿಯ ಭೀತಿ ಆವರಿಸಿದೆ. ಮೂಡಿಗೆರೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ರಸ್ತೆಗಳು ನದಿಯಂತಾಗಿವೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿದ್ದು, ಮಾರುಕಟ್ಟೆಗೆ ಬಂದಿದ್ದ ಸಾರ್ವಜನಿಕರು ಮತ್ತು ವಾಹನ ಸವಾರರು ಹೈರಾಣಾಗಿದ್ದಾರೆ. ಮಲೆನಾಡು ಭಾಗದ ಹಲವೆಡೆ ಮರಗಳು ಉರುಳುವ ಭೀತಿ ಎದುರಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.
ವಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ