ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್: ಹೊಸಕೋಟೆ ಪೊಲೀಸರ ಬಲೆಗೆ ಬಿದ್ದ ಒಡಿಶಾ ಮೂಲದ ವ್ಯಕ್ತಿ
ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಕಳ್ಳತನ ಮಾಡುವುದನ್ನು ಕಲಿತಿದ್ದ ಶುಭಂ ಸೇನಾಪತಿ ಎಂಬ ವ್ಯಕ್ತಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ದುರ್ಗಾ ಮೊಬೈಲ್ ಅಂಗಡಿಯಿಂದ 15 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ಕದ್ದಿದ್ದ ಆರೋಪಿಯನ್ನು ಸಿ.ಸಿ.ಟಿ.ವಿ. ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆ ಹಚ್ಚಲಾಗಿದೆ. ಈ ವಿಡಿಯೋ ಸ್ಟೋರಿ ಇಲ್ಲಿದೆ ನೋಡಿ
ಬೆಂಗಳೂರು, ಅ.22: ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಮೊಬೈಲ್ ಕಳ್ಳತನ ಮಾಡುವುದನ್ನು ಕಲಿತಿದ್ದ ಖತರ್ನಾಕ್ ಕಳ್ಳನೋರ್ವನನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ 30 ವರ್ಷದ ಶುಭಂ ಸೇನಾಪತಿ ಎಂಬಾತ ಅಕ್ಟೋಬರ್ 12ರಂದು ದುರ್ಗಾ ಮೊಬೈಲ್ ಅಂಗಡಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ದೋಚಿದ್ದ. ಕಳ್ಳತನದ ಮೊದಲು ಅಂಗಡಿಯ ಮುಂದೆ ಯಾರ ಗಮನಕ್ಕೂ ಬರದಂತೆ ಟಾರ್ಪಲ್ ಕಟ್ಟಿ, ನಂತರ ರೋಲಿಂಗ್ ಶಟರ್ ಮುರಿದು ಒಳನುಗ್ಗಿದ್ದ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಗ್ಯಾಸ್ ಕಟ್ಟರ್ ಅನ್ನು ಕೂಡ ಖರೀದಿಸಿದ್ದನು. ಅಂಗಡಿಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬ್ರ್ಯಾಂಡ್‌ಗಳ ಮೊಬೈಲ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ. ಈ ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರಿಸಿ ತನಿಖೆ ಕೈಗೊಂಡ ಹೊಸಕೋಟೆ ಪೊಲೀಸರು ಕಳ್ಳತನ ಪ್ರಕರಣವನ್ನು ಭೇದಿಸಿ, ಆರೋಪಿ ಶುಭಂ ಸೇನಾಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳ್ಳತನವಾಗಿದ್ದ 15 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಯೂಟ್ಯೂಬ್ ನೋಡಿ ಕೃತ್ಯವೆಸಗುತ್ತಿದ್ದ ಕಳ್ಳನಿಗೆ ಪೊಲೀಸರು ಕಡಿವಾಣ ಹಾಕಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
