ಮೃತ್ಯು ಮಡಿಲಲ್ಲಿ ಒಂದು ಗಂಟೆ! ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ ‘ಫ್ಲೈ 91’ ವಿಮಾನ

Updated on: Apr 22, 2026 | 12:55 PM

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 'ಫ್ಲೈ 91' ವಿಮಾನವು ಲ್ಯಾಂಡಿಂಗ್ ಸಮಸ್ಯೆಗೆ ಸಿಲುಕಿತ್ತು. ಬೆಂಗಳೂರಿನಿಂದ ಬಂದ ವಿಮಾನವು ತಾಂತ್ರಿಕ ತೊಂದರೆ ಅಥವಾ ಹವಾಮಾನ ವೈಪರೀತ್ಯದಿಂದಾಗಿ ಸುಮಾರು ಒಂದು ಗಂಟೆ ಕಾಲ ಆಗಸದಲ್ಲೇ ಸುತ್ತಾಡಿತ್ತು. ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದ ಈ ಘಟನೆ ಅಂತಿಮವಾಗಿ ಸುರಕ್ಷಿತ ಲ್ಯಾಂಡಿಂಗ್‌ನೊಂದಿಗೆ ಕೊನೆಗೊಂಡಿತು. ರಾತ್ರಿ 9:15ಕ್ಕೆ ವಿಮಾನ ಸುರಕ್ಷಿತವಾಗಿ ಇಳಿದು ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಹುಬ್ಬಳ್ಳಿ, ಏ.22: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ‘ಫ್ಲೈ 91’ ಸಂಸ್ಥೆಯ ವಿಮಾನವು ಮತ್ತೊಮ್ಮೆ ಲ್ಯಾಂಡಿಂಗ್ ಸಮಸ್ಯೆಗೆ ಸಿಲುಕಿದ್ದು, ಪ್ರಯಾಣಿಕರಲ್ಲಿ ಭೀತಿ ಮೂಡಿಸಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ವಿಮಾನವು ನಿಗದಿತ ಸಮಯಕ್ಕೆ ಲ್ಯಾಂಡ್ ಆಗಲಾಗದೆ ಸುಮಾರು ಒಂದು ಗಂಟೆ ಕಾಲ ಆಗಸದಲ್ಲೇ ಸುತ್ತಾಡಿದ ಘಟನೆ ನಿನ್ನೆ ನಡೆದಿದೆ. ನಿನ್ನೆ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ IC3412 AT-76 ಸಂಖ್ಯೆಯ ಫ್ಲೈ 91 ವಿಮಾನವು ರಾತ್ರಿ 8:15ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಲ್ಯಾಂಡಿಂಗ್ ವೇಳೆ ತಾಂತ್ರಿಕ ತೊಂದರೆ ಅಥವಾ ಹವಾಮಾನ ವೈಪರೀತ್ಯದ ಕಾರಣದಿಂದ ವಿಮಾನಕ್ಕೆ ಕೆಳಗಿಳಿಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನವು ಹುಬ್ಬಳ್ಳಿ ಮತ್ತು ದಾಂಡೇಲಿ ಸುತ್ತಮುತ್ತಲಿನ ಪ್ರದೇಶಗಳ ಆಗಸದಲ್ಲಿ ಒಂದು ಗಂಟೆ ಕಾಲ ಹಾರಾಟ ನಡೆಸಿದೆ. ಅಂತಿಮವಾಗಿ ರಾತ್ರಿ 9:15ಕ್ಕೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಫ್ಲೈ 91 ಏರ್‌ಲೈನ್ಸ್ ಕಂಪನಿಗೆ ಇದು ಸತತ ಎರಡನೇ ಘಟನೆಯಾಗಿದೆ. ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬಂದಿದ್ದ ಇದೇ ಕಂಪನಿಯ ವಿಮಾನವು 4 ಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ, ಕೊನೆಗೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿತ್ತು. ಮರುಕಳಿಸುತ್ತಿರುವ ಇಂತಹ ಘಟನೆಗಳಿಂದಾಗಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹವಾಮಾನ ವೈಪರೀತ್ಯದ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದರೂ, “ಕೇವಲ ಫ್ಲೈ 91 ವಿಮಾನಕ್ಕೆ ಮಾತ್ರ ಯಾಕೆ ಪದೇ ಪದೇ ತೊಂದರೆಯಾಗುತ್ತಿದೆ?” ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us