ಗುಜರಿ ವ್ಯಾಪಾರಿ ಇಮ್ರಾನ್ ಪಾಷ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪೊಲೀಸರ ಮುಂದೆ ಶರಣಾದ ಕಾಂಗ್ರೆಸ್ ಮುಖಂಡ

Updated on: Nov 19, 2026 | 11:35 AM

ಗುಜರಿ ವ್ಯಾಪಾರಿ ಇಮ್ರಾನ್ ಪಾಷ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ನವೀದ್ ಬೇಗ್ ಬಾಗಲೂರು ಪೊಲೀಸರ ಮುಂದೆ ಶರಣಾಗಿದ್ದಾನೆ. ನವೆಂಬರ್ 17ರಂದು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ವ್ಯಾಪಾರ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದ್ದು, ನವೀದ್ ತನ್ನ ಲೈಸೆನ್ಸ್ಡ್ ವೆಪನ್‌ನಿಂದ ಗುಂಡು ಹಾರಿಸಿದ್ದಾನೆ. ಮತ್ತೊಬ್ಬ ಆರೋಪಿ ಮುಬಾರಕ್ ಸಹ ಬಂಧನದಲ್ಲಿದ್ದಾನೆ.

ಬೆಂಗಳೂರು, ನ,19: ರಾಜಧಾನಿ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಗುಜರಿ ವ್ಯಾಪಾರಿ ಇಮ್ರಾನ್ ಪಾಷ ಗುಂಡಿಕ್ಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಬಾಪೂಜಿನಗರದ ಕಾಂಗ್ರೆಸ್ ಮುಖಂಡ ನವೀದ್ ಬೇಗ್ ಬಾಗಲೂರು ಪೊಲೀಸರ ಮುಂದೆ ಶರಣಾಗಿದ್ದಾನೆ. ಇದೇ ವೇಳೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಮುಬಾರಕ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೆ.ಪಿ. ಅಗ್ರಹಾರದ ನಿವಾಸಿ ನವೀದ್ ಬೇಗ್ ಮತ್ತು ಮೃತ ಇಮ್ರಾನ್ ಪಾಷ ಇಬ್ಬರೂ ಕೋಟ್ಯಂತರ ರೂಪಾಯಿ ಮೌಲ್ಯದ ಗುಜರಿ ವ್ಯಾಪಾರ ನಡೆಸುತ್ತಿದ್ದರು. ಬನ್ನೇರುಘಟ್ಟ ಭಾಗದ ಇಮ್ರಾನ್ ಪಾಷ ತಮ್ಮ ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶಿಸಿದ್ದಕ್ಕೆ ನವೀದ್ ಬೇಗ್ ಹಲವು ಬಾರಿ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಇದೇ ವ್ಯಾಪಾರದ ಪೈಪೋಟಿ ಹಾಗೂ ವೈಷಮ್ಯ ಕೊಲೆಗೆ ಪ್ರಮುಖ ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ. ವ್ಯಾಪಾರದ ವಿಚಾರವಾಗಿ ಮಾತುಕತೆ ನಡೆಸುವ ನೆಪದಲ್ಲಿ ಇಮ್ರಾನ್ ಪಾಷ ಅವರನ್ನು ಕರೆಸಿಕೊಂಡಿದ್ದ ನವೀದ್ ಬೇಗ್, ತನ್ನ ಲೈಸೆನ್ಸ್ಡ್ ವೆಪನ್‌ನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ನವೀದ್‌ಗೆ ಪೊಲೀಸರು ಆತನ ಕುಟುಂಬಸ್ಥರ ಮೂಲಕ ಕಠಿಣ ಎಚ್ಚರಿಕೆ ರವಾನಿಸಿದ್ದರು. ಪೊಲೀಸರ ಒತ್ತಡ ಹೆಚ್ಚಾದ ಬೆನ್ನಲ್ಲೇ ನವೀದ್ ಬಾಗಲೂರು ಠಾಣೆಗೆ ಬಂದು ಶರಣಾಗಿದ್ದಾನೆ.

ಪ್ರಕರಣದ ಹಿನ್ನೆಲೆ ಏನು?

ನವೆಂಬರ್ 17ರಂದು ಗುಜರಿ ವ್ಯಾಪಾರಿ ಇಮ್ರಾನ್ ಪಾಷ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಬಳಿಕ ಮಂಚೇನಹಳ್ಳಿ ಬಳಿ ನಿಂತಿದ್ದ ಕಾರೊಂದರಲ್ಲಿ ಇಮ್ರಾನ್ ಪಾಷ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮೃತ ಇಮ್ರಾನ್ ಕುಟುಂಬಸ್ಥರು, ಬಾಪೂಜಿನಗರದ ಕಾಂಗ್ರೆಸ್ ಮುಖಂಡ ನವೀದ್ ಬೇಗ್ ವಿರುದ್ಧ ನೇರ ಆರೋಪ ಮಾಡಿದ್ದರು. ದೂರು ದಾಖಲಿಸಿಕೊಂಡ ಬಾಗಲೂರು ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಪ್ರಮುಖ ಆರೋಪಿ ನವೀದ್ ಬೇಗ್ ಶರಣಾಗಿದ್ದು, ಸಹಚರ ಮುಬಾರಕ್ ಬಂಧನವಾಗುವುದರೊಂದಿಗೆ ಕೊಲೆಯ ಇನ್ನಷ್ಟು ರಹಸ್ಯಗಳು ಹೊರಬರುವ ನಿರೀಕ್ಷೆಯಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More