ರಿಷಭ್ ಪಂತ್ರನ್ನು ಘಾಸಿಗೊಳಿಸಿದ ಆಫ್ರಿಕಾ ವೇಗಿಯ ಸತತ 3 ಎಸೆತಗಳು; ವಿಡಿಯೋ
Rishabh Pant injury: ದಕ್ಷಿಣ ಆಫ್ರಿಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ನಾಯಕ ರಿಷಭ್ ಪಂತ್ ಗಾಯಗೊಂಡು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದರು. ಇಂಜುರಿಯಿಂದ ಚೇತರಿಸಿಕೊಂಡಿದ್ದ ಪಂತ್‌ಗೆ ಮತ್ತೆ ಗಾಯದ ಸಮಸ್ಯೆಯಾಗಿತ್ತು. ಆದಾಗ್ಯೂ, ಕೆಲ ಸಮಯದ ನಂತರ ಮತ್ತೆ ಬ್ಯಾಟಿಂಗ್‌ಗೆ ಮರಳಿದ ಅವರು ಸ್ಫೋಟಕ 65 ರನ್ ಬಾರಿಸಿ ಅರ್ಧಶತಕ ಪೂರೈಸಿದರು.
ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಮೇಲುಗೈ ಸಾಧಿಸಿದೆ. ಆದಾಗ್ಯೂ ಈ ಪಂದ್ಯದ ಮೂರನೇ ದಿನದಾಟದಂದು ತಂಡದ ನಾಯಕ ರಿಷಭ್ ಪಂತ್ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್‌ಗೆ ಮರಳಬೇಕಾಯಿತು. ಈಗಷ್ಟೇ ಇಂಜುರಿಯಿಂದ ಚೇತರಿಸಿಕೊಂಡು ಟೀಂ ಇಂಡಿಯಾವನ್ನು ಕೂಡಿಕೊಂಡಿದ್ದ ಪಂತ್‌ಗೆ ಮತ್ತೆ ಇಂಜುರಿ ಸಮಸ್ಯೆ ಎದುರಾಗಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದಾಗ್ಯೂ ಕೆಲ ಸಮಯದ ನಂತರ ಮತ್ತೆ ಬ್ಯಾಟಿಂಗ್ ಮಾಡಲು ಬಂದ ಪಂತ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಅಭಿಮಾನಿಗಳು ನಿಟ್ಟುಸಿರುಬಿಡುವಂತೆ ಮಾಡಿದರು.
ವಾಸ್ತವವಾಗಿ ಪಂದ್ಯದ ಮೂರನೇ ದಿನದಂದು ರಿಷಭ್ ಪಂತ್ ಗಾಯಗೊಂಡರು. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ತ್ಸೆಪೋ ಮೊರೆಕಿ ಅವರ ಮೂರು ಎಸೆತಗಳು ಪಂತ್ ದೇಹಕ್ಕೆ ತಗುಲಿದವು. ಮೊದಲ ಚೆಂಡು ಅವರ ಹೆಲ್ಮೆಟ್‌ಗೆ ಬಡಿಯಿತು. ನಂತರದ ಎಸೆತ ಎಡ ಮೊಣಕೈಗೆ ಬಡಿಯಿತು. ನಂತರ, ಮತ್ತೊಂದು ಚೆಂಡು ಅವರ ಹೊಟ್ಟೆಗೆ ಬಡಿಯಿತು. ಇದರಿಂದಾಗಿ ಪಂತ್ ಗಾಯಗೊಂಡು ಬ್ಯಾಟಿಂಗ್ನಿಂದ ನಿವೃತ್ತರಾಗಿದ್ದರು.
ರಿಷಭ್ ಪಂತ್ ಗಾಯಗೊಂಡು ನಿವೃತ್ತಿ ಹೊಂದಿದಾಗ, ಅವರು 22 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 17 ರನ್ ಗಳಿಸಿದ್ದರು. ಆದರೆ ಗಮನಾರ್ಹ ವಿಷಯವೆಂದರೆ ಸ್ವಲ್ಪ ಸಮಯದ ನಂತರ ಮತ್ತೆ ಬ್ಯಾಟಿಂಗ್‌ಗೆ ಬಂದ ಪಂತ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಈ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಒಟ್ಟು 54 ಎಸೆತಗಳನ್ನು ಎದುರಿಸಿ 65 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ