Video: ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್ ಹಾಕಲು ಹೊಸ ‘QR ಕೋಡ್’ ಅಸ್ತ್ರ!

Updated on: Aug 18, 2026 | 2:44 PM

ಕರ್ನಾಟಕದಲ್ಲಿ ಆಹಾರ ಸುರಕ್ಷತೆ ಮತ್ತು ವೈದ್ಯಕೀಯ ಸೇವೆಗಳ ಗುಣಮಟ್ಟ ಸುಧಾರಿಸಲು QR ಕೋಡ್ ಆಧಾರಿತ ದೂರು ವ್ಯವಸ್ಥೆ ಜಾರಿಯಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಈ ಹೊಸ ಉಪಕ್ರಮದಿಂದ ಗ್ರಾಹಕರು ಹೋಟೆಲ್ ಆಹಾರ ಕಳಪೆ ಅಥವಾ ಔಷಧಿ ದುಬಾರಿ/ಕಳಪೆಯಾಗಿದ್ದಲ್ಲಿ ಕೂಡಲೇ ದೂರು ದಾಖಲಿಸಬಹುದು. ಈ ವ್ಯವಸ್ಥೆ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ.

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹೋಟೆಲ್ ಆಹಾರದ ಗುಣಮಟ್ಟ ಮತ್ತು ಔಷಧ ಮಳಿಗೆಗಳ ಸೇವೆಗಳ ವಿರುದ್ಧ ಗ್ರಾಹಕರು ದೂರು ನೀಡಲು ಸುಲಭ ಮತ್ತು ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ವತಿಯಿಂದ ಈ QR ಕೋಡ್ ಆಧಾರಿತ ದೂರು ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಕಳಪೆ ಆಹಾರ ಮತ್ತು ಅವಧಿ ಮೀರಿದ/ನಕಲಿ ಔಷಧಿಗಳ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಇನ್ಮುಂದೆ ಹೋಟೆಲ್‌ಗಳು ಮತ್ತು ಮೆಡಿಕಲ್ ಸ್ಟೋರ್‌ಗಳ ಹೊರಗೆ QR ಕೋಡ್‌ಗಳನ್ನು ಅಂಟಿಸಲಾಗುತ್ತದೆ. ಗ್ರಾಹಕರು ತಮ್ಮ ಮೊಬೈಲ್ ಮೂಲಕ ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಗುಣಮಟ್ಟವಿಲ್ಲದ ಆಹಾರ, ಶುಚಿತ್ವದ ಕೊರತೆ, ಹೆಚ್ಚಿನ ಬೆಲೆಗೆ ಔಷಧಿ ಮಾರಾಟ, ನಕಲಿ ಔಷಧಿಗಳ ಮಾರಾಟ, ಬಿಲ್ ನೀಡದಿರುವುದು ಇತ್ಯಾದಿ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಬಹುದು. ದೂರು ದಾಖಲಾದ ಕೆಲವೇ ನಿಮಿಷಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ. ಈ ತಂತ್ರಜ್ಞಾನ ಆಧಾರಿತ ದೂರು ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಗ್ರಾಹಕರ ಹಿತರಕ್ಷಣೆಗೆ ಮತ್ತು ಆಹಾರ ಹಾಗೂ ಔಷಧ ಗುಣಮಟ್ಟದ ಸುಧಾರಣೆಗೆ ಮಹತ್ವದ ಹೆಜ್ಜೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 18, 2026 02:43 PM
Loading...
Unable to load recommendations.
Follow Us