ಗದಗ, ಜ.11: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆಯ ಅಡಿಪಾಯ ಹಾಕುವಾಗ ದೊರೆತ ಚಿನ್ನದ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ಆರಂಭದಲ್ಲಿ, ಇದು ನಿಧಿ ಎಂದು ಪರಿಗಣಿಸಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಲಾಗಿತ್ತು. ಆದರೆ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಇದು ನಿಧಿ ಅಲ್ಲ, ಬದಲಿಗೆ ಕುಟುಂಬದ ಹಿರಿಯರು ತಮ್ಮ ಮನೆಯಲ್ಲೇ ಇಟ್ಟಿದ್ದ ಬಂಗಾರ ಎಂದು ಸ್ಪಷ್ಟಪಡಿಸಿದ್ದಾರೆ. ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಮೂಲಿಮನಿ ಅವರು, ಪತ್ತೆಯಾದ ಚಿನ್ನವು ಪ್ರಾಚೀನ ನಿಧಿಯ ವರ್ಗಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಯು ಇಡೀ ಗ್ರಾಮಸ್ಥರು ಮತ್ತು ಚಿನ್ನ ಸಿಕ್ಕ ಕುಟುಂಬದ ಮನಸ್ಥಿತಿಯನ್ನು ಬದಲಾಯಿಸಿದೆ. ಅಧಿಕಾರಿಗಳ ಸ್ಪಷ್ಟನೆ ಬೆನ್ನಲ್ಲೇ, ಇದು ನಿಧಿ ಅಲ್ಲದಿದ್ದರೆ, ನಮ್ಮದೇ ಆದ ಚಿನ್ನವನ್ನು ನಮಗೆ ವಾಪಸ್ ಕೊಡಿ ಎಂದು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಈಗ ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಮೊದಲಿಗೆ ಸರ್ಕಾರಕ್ಕೆ ಒಪ್ಪಿಸಲು ಸಮ್ಮತಿಸಿದ್ದ ಕುಟುಂಬ, ಈಗ ಚಿನ್ನದ ಮರುಪಡೆಯುವಿಕೆಗೆ ಪಟ್ಟು ಹಿಡಿದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ