ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ, ಉದ್ಯಮಿಗಳಿಗೆ ಬಿಗ್ ರಿಲೀಫ್

Updated on: Jun 26, 2026 | 7:51 AM

ಮುಖ್ಯಾಂಶಗಳು

  • ವಾಣಿಜ್ಯ ಎಲ್‌ಪಿಜಿ ಪೂರೈಕೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
  • ಹಾರ್ಮುಜ್ ಜಲಸಂಧಿ ಮುಕ್ತವಾಗಿದ್ದರಿಂದ ಇಂಧನದ ಆಮದು ಪ್ರಮಾಣ ಸುಧಾರಣೆ.
  • ಕೈಗಾರಿಕೆಗಳಿಗೆ ಶೇಕಡಾ ಐವತ್ತರಷ್ಟು ಎಲ್‌ಪಿಜಿ ಪೂರೈಕೆಯನ್ನು ತಕ್ಷಣವೇ ಪುನಃಸ್ಥಾಪಿಸಲು ಆದೇಶ.

ಹೋಟೆಲ್, ರೆಸ್ಟೋರೆಂಟ್‌ಗಳು ಸೇರಿದಂತೆ ವಾಣಿಜ್ಯ ಎಲ್ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಭಾರಿ ಸಮಾಧಾನ ಸಿಕ್ಕಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಪೂರೈಕೆ ಮೇಲಿದ್ದ ಶೇ.50ರಷ್ಟು ನಿರ್ಬಂಧವನ್ನು ತೆರವುಗೊಳಿಸಿದೆ. ಗಲ್ಫ್ ಪರಿಸ್ಥಿತಿ ಸುಧಾರಣೆ ಮತ್ತು ದೇಶೀಯ ಉತ್ಪಾದನೆ ಹೆಚ್ಚಳದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಮೂರು ತಿಂಗಳುಗಳ ಕಾಲ ಈ ನಿಯಮ ಜಾರಿಯಲ್ಲಿರಲಿದೆ.

ನವದೆಹಲಿ, ಜೂನ್ 26: ಕೈಗಾರಿಕಾ ಮತ್ತು ವಾಣಿಜ್ಯ ಎಲ್‌ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ದೇಶೀಯವಲ್ಲದ ಎಲ್‌ಪಿಜಿ ಪೂರೈಕೆಯ ಮೇಲೆ ಹೇರಲಾಗಿದ್ದ ಎಲ್ಲಾ ವಲಯ ನಿರ್ಬಂಧಗಳನ್ನು ಕೇಂದ್ರವು ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ. ಇನ್ಮುಂದೆ ಈ ಸರಬರಾಜುಗಳು ಸಹಜ ಸ್ಥಿತಿಗೆ ಮರಳಲಿವೆ.

ಈ ಒಪ್ಪಂದದಿಂದಾಗಿ, ಭಾರತದ ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದಿನ ಪ್ರಮುಖ ಮಾರ್ಗವಾಗಿದ್ದ ‘ಹಾರ್ಮುಜ್ ಜಲಸಂಧಿ’ ಸಮುದ್ರ ಮಾರ್ಗವು ಮತ್ತೆ ಮುಕ್ತವಾಗಿದೆ. ಹೀಗಾಗಿ ಆಮದು ಪ್ರಮಾಣ ಮತ್ತು ಸ್ಥಳೀಯ ಇಂಧನ ಲಭ್ಯತೆ ಗಣನೀಯವಾಗಿ ಸುಧಾರಿಸಿದೆ.

ಯುದ್ಧದ ವಾತಾವರಣದಿಂದಾಗಿ ಜಾಗತಿಕ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ವಾಣಿಜ್ಯ ಬಳಕೆದಾರರಿಗೆ ಬೃಹತ್ ಎಲ್‌ಪಿಜಿ (Bulk LPG) ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿರುವುದರಿಂದ, ಬಿಕ್ಕಟ್ಟಿನ ಮುಂಚೆ ಇದ್ದ ಬಳಕೆಯ ಮಟ್ಟದ ಶೇ. 50 ರಷ್ಟು ಪೂರೈಕೆಯನ್ನು ತಕ್ಷಣವೇ ಪುನಃಸ್ಥಾಪಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆದೇಶಿಸಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಉತ್ಪಾದನೆ ಹೆಚ್ಚಿಸಲು ಭಾರಿ ನೆರವಾಗಲಿದೆ.

ಈ ಹೊಸ ಇಂಧನ ನೀತಿಯ ಸುಗಮ ಜಾರಿಗೆ ಸಹಕರಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಇದು ದೇಶದ ಇಂಧನ ಅಗತ್ಯಗಳನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us