ಅವರ ಆಜ್ಞೆಯಂತೆ ಎಲ್ಲವನ್ನು ಮಾಡಿದ್ದೇನೆ: ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ

Updated on: Sep 14, 2026 | 1:38 PM

ಮುಂಬೈ ಬಿಜೆಪಿ ಶಾಸಕ ಪರಾಗ್ ಶಾ ತಮ್ಮ ಗುರುಗಳ ಸಲಹೆಯಂತೆ ಭಿಕ್ಷುಕನ ವೇಷ ಧರಿಸಿ ಘಾಟ್‌ಕೋಪರ್ ರಸ್ತೆಗಳಲ್ಲಿ ಭಿಕ್ಷೆ ಬೇಡಿದ್ದಾರೆ. ಕೋಟ್ಯಧಿಪತಿಯಾದ ಅವರು ಒಂದು ದಿನ ಬಡ ಭಿಕ್ಷುಕನಂತೆ ಜೀವಿಸಿ, ಬಡತನದ ಕಷ್ಟ, ಸಾರ್ವಜನಿಕರ ಪ್ರತಿಕ್ರಿಯೆಯನ್ನು ನೇರವಾಗಿ ಅನುಭವಿಸಿದರು. ಈ ವಿಶಿಷ್ಟ ಸಾಮಾಜಿಕ ಪ್ರಯೋಗದ ವಿಡಿಯೋಗಳು ವೈರಲ್ ಆಗಿದ್ದು, ಸಮಾಜದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದು ಶಾಸಕರಿಗೆ ಅಮೂಲ್ಯ ಜೀವನಪಾಠ ನೀಡಿದೆ.

ಮುಂಬೈ, ಸೆ.14: ಭದ್ರತಾ ಸಿಬ್ಬಂದಿ, ಐಷಾರಾಮಿ ಕಾರುಗಳು ಮತ್ತು ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಬಡ ಭಿಕ್ಷುಕನ ವೇಷ ಧರಿಸಿ ಶಾಸಕರೊಬ್ಬರು ರಸ್ತೆಯಲ್ಲಿ ಭಿಕ್ಷೆ ಬೇಡಿದ ಅಪರೂಪದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಮುಂಬೈನ ಘಾಟ್‌ಕೋಪರ್ ಈಸ್ಟ್ (Ghatkopar East) ಕ್ಷೇತ್ರದ ಬಿಜೆಪಿ ಶಾಸಕ, ಸುಮಾರು 5 ಸಾವಿರ ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ ಉದ್ಯಮಿ ಪರಾಗ್ ಶಾ (Parag Shah) ಅವರೇ ಈ ವಿಭಿನ್ನ ಪ್ರಯೋಗ ನಡೆಸಿ ಸುದ್ದಿಯಾಗಿದ್ದಾರೆ. ಜೈನ ಧರ್ಮದ ಚಾತುರ್ಮಾಸದ ಹಿನ್ನೆಲೆಯಲ್ಲಿ ಶಾಸಕ ಪರಾಗ್ ಶಾ ಅವರು ತಮ್ಮ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಈ ಆತ್ಮಾನುಭವ ಪಡೆಯಲು ನಿರ್ಧರಿಸಿದ್ದರು. ಶಾಸಕರು ಮುಖಕ್ಕೆ ವಿಶೇಷ ಮೇಕಪ್ ಮಾಡಿಕೊಂಡು, ಹರಿದ-ಸಾಧಾರಣ ಬಟ್ಟೆಗಳನ್ನು ಧರಿಸಿ ಕಂಪ್ಲೀಟ್ ಆಗಿ ಭಿಕ್ಷುಕನ ರೂಪ ತಳೆದಿದ್ದರು. ಘಾಟ್‌ಕೋಪರ್‌ನ ರಸ್ತೆಗಳಲ್ಲಿ ದಿನವಿಡೀ ಭಿಕ್ಷೆ ಬೇಡುತ್ತಾ ಓಡಾಡಿದರೂ ಸಹ ಅವರ ಸ್ವಂತ ಕ್ಷೇತ್ರದ ಜನರಿಗಾಗಲಿ ಅಥವಾ ಹತ್ತಿರದವರಿಗಾಗಲಿ ಅವರು ಶಾಸಕ ಪರಾಗ್ ಶಾ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಸಾರ್ವಜನಿಕರಿಂದ ಸಿಕ್ಕ ಭಿಕ್ಷೆಯ ಹಣ ಹಾಗೂ ಆಹಾರವನ್ನೇ ಸೇವಿಸಿ, ಸಾಮಾನ್ಯ ಭಿಕ್ಷುಕ ಅನುಭವಿಸುವ ಕಷ್ಟ, ಸವಾಲುಗಳು ಮತ್ತು ಜನರ ನಡವಳಿಕೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿದರು. ಇಡೀ ದಿನದ ಭಿಕ್ಷುಕನ ವೇಷದ ಪ್ರಯೋಗ ಮುಗಿದ ಬಳಿಕ, ಪರಾಗ್ ಶಾ ಅವರು ತಮ್ಮ ಮೇಕಪ್ ತೆಗೆದು ಸಾಮಾನ್ಯ ಶಾಸಕರಾಗಿ ಜನರ ಮುಂದೆ ಬಂದರು. ತಮಗೆ ಲಭಿಸಿದ ಈ ಅಪರೂಪದ ಜೀವನಪಾಠ ಮತ್ತು ರಸ್ತೆಯಲ್ಲಿದ್ದಾಗ ಜನರು ತೋರಿದ ಪ್ರತಿಕ್ರಿಯೆಗಳ ಬಗ್ಗೆ ಗುರುಗಳು ಹಾಗೂ ಸಾರ್ವಜನಿಕರ ಬಳಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರಸ್ತುತ ಕೋಟ್ಯಧಿಪತಿ ಶಾಸಕ ರಸ್ತೆಯಲ್ಲಿ ಭಿಕ್ಷುಕನಾಗಿ ನಿಂತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಗೂ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More