ರೊಮೊರಿಯೊ ಸಿಡಿಲಬ್ಬರ: ವಿಂಡೀಸ್ ಪಡೆಗೆ ಮತ್ತೊಮ್ಮೆ ವಿರೋಚಿತ ಸೋಲು

Updated on: Nov 09, 2025 | 12:53 PM

New Zealand vs West Indies: ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 7 ರನ್​ಗಳ ರೋಚಕ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಟಿ20 ಪಂದ್ಯವನ್ನು ನ್ಯೂಝಿಲೆಂಡ್ ತಂಡ ಕೇವಲ 3 ರನ್​ಗಳಿಂದ ಗೆದ್ದುಕೊಂಡಿದ್ದರು. ಇದೀಗ ಮೂರನೇ ಪಂದ್ಯದಲ್ಲೂ ವಿರೋಚಿತವಾಗಿ ಪ್ರದರ್ಶನ ನೀಡಿ ವಿಂಡೀಸ್ ಪಡೆ 9 ರನ್​ಗಳ ಸೋಲನುಭವಿಸಿದೆ.

ನ್ಯೂಝಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ 3ನೇ ಟಿ20 ಪಂದ್ಯ ಕೂಡ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ನೆಲ್ಸನ್​ನ ಸಾಕ್ಷಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತು.

178 ರನ್​​ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಕೇವಲ 68 ರನ್​​ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಈ ಹಂತದಲ್ಲಿ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಬಿರುಸಿನ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ ರೊಮಾರಿಯೊ ಶೆಫರ್ಡ್ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 49 ರನ್ ಚಚ್ಚಿದರು. ಇನ್ನು ಶೆಫರ್ಡ್​ಗೆ ಉತ್ತಮ ಸಾಥ್ ನೀಡಿದ ಶಮರ್ ಸ್ಪ್ರಿಂಗರ್ 20 ಎಸೆತಗಳಲ್ಲಿ 39 ರನ್ ಬಾರಿಸಿದರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು ಕೊನೆಯ ಓವರ್​ನಲ್ಲಿ 12 ರನ್​ಗಳ ಗುರಿ ಪಡೆಯಿತು.

ಆದರೆ ಅಂತಿಮ ಓವರ್​ನ 5ನೇ ಎಸೆತದಲ್ಲಿ ರೊಮಾರಿಯೊ ಶೆಫರ್ಡ್ ಕ್ಯಾಚ್ ನೀಡಿ ಔಟಾದರು. ಪರಿಣಾಮ 19.5 ಓವರ್​ಗಳಲ್ಲಿ 168 ರನ್​ಗಳಿಸಿ ವೆಸ್ಟ್ ಇಂಡೀಸ್ ತಂಡವು ಕೇವಲ 9 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 7 ರನ್​ಗಳ ರೋಚಕ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಟಿ20 ಪಂದ್ಯವನ್ನು ನ್ಯೂಝಿಲೆಂಡ್ ತಂಡ ಕೇವಲ 3 ರನ್​ಗಳಿಂದ ಗೆದ್ದುಕೊಂಡಿದ್ದರು. ಇದೀಗ ಮೂರನೇ ಪಂದ್ಯದಲ್ಲೂ ವಿರೋಚಿತವಾಗಿ ಪ್ರದರ್ಶನ ನೀಡಿ ವಿಂಡೀಸ್ ಪಡೆ 9 ರನ್​ಗಳ ಸೋಲನುಭವಿಸಿದೆ.