LSG vs DC: ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರಿಷಭ್ ಪಂತ್; ವಿಡಿಯೋ
Rishabh Pant's Unlucky Run-Out: ಐಪಿಎಲ್ 2026 ರ 5ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಲಕ್ನೋ ಪರ ಇನ್ನಿಂಗ್ಸ್ ಆರಂಭಿಸಿದ ರಿಷಭ್ ಪಂತ್, 7 ರನ್ ಗಳಿಸಿ ದುರದೃಷ್ಟಕರವಾಗಿ ರನೌಟ್ ಆದರು. ಮಿಚೆಲ್ ಮಾರ್ಷ್ ಆಡಿದ ಚೆಂಡು ಬೌಲರ್ ಮುಖೇಶ್ ಕುಮಾರ್ ಕೈಗೆ ತಾಗಿ ನಾನ್-ಸ್ಟ್ರೈಕ್ ವಿಕೆಟ್‌ಗೆ ಬಡಿಯಿತು. ಕ್ರೀಸ್‌ನಿಂದ ಹೊರಗಿದ್ದ ಪಂತ್ ಹೊರನಡೆಯಬೇಕಾಯಿತು, ಇದು ಪಂದ್ಯಕ್ಕೆ ಅನಿರೀಕ್ಷಿತ ತಿರುವು ನೀಡಿತು.
ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಲಕ್ನೋ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಅದರಂತೆ ಆರಂಭಿಕರಾಗಿ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್ ಕಣಕ್ಕಿಳಿದಿದ್ದರು. ಇಬ್ಬರು ಮೊದಲ ಮೂರು ಓವರ್ಗಳಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ 19 ರನ್ ಕೂಡ ಕಲೆಹಾಕಿದರು. ಆದರೆ ಮುಖೇಶ್ ಕುಮಾರ್ ಬೌಲ್ ಮಾಡಿದ ಮೂರನೇ ಓವರ್ನ ಕೊನೆಯ ಎಸೆತದಲ್ಲಿ ರಿಷಭ್ ಪಂತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾಗಬೇಕಾಯಿತು.
ಈ ಪಂದ್ಯದಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆ ತೆರೆದಿದ್ದ ರಿಷಭ್ ಪಂತ್, ಆರಂಭದಲ್ಲೇ ಅಬ್ಬರಿಸುವ ಸುಳಿವು ನೀಡಿದ್ದರು. ಆದರೆ ಮೂರನೇ ಓವರ್ನಲ್ಲಿ ರಿಷಭ್ ಪಂತ್ ಅನಿರೀಕ್ಷಿತವಾಗಿ ಔಟಾಗಬೇಕಾಯಿತು. ಮುಖೇಶ್ ಕುಮಾರ್ ಎಸೆದ ಈ ಓವರ್ನ ಕೊನೆಯ ಎಸೆತವನ್ನು ಮಿಚೆಲ್ ಮಾರ್ಷ್ ನೇರವಾಗಿ ಬೌಲರ್ ಕಡೆಗೆ ಆಡಿದರು. ಇತ್ತ ಬೌಲರ್ ಮುಖೇಶ್ ಆ ಚೆಂಡನ್ನು ಹಿಡಿಯಲು ಯತ್ನಿಸಿದರು. ಒಂದು ವೇಳೆ ಮುಖೇಶ್ ಆ ಚೆಂಡನ್ನು ಹಿಡಿದಿದ್ದರೆ, ಮಾರ್ಷ್ ಕ್ಯಾಚ್ ಔಟ್ ಆಗುತ್ತಿದ್ದರು. ಆದರೆ ಮುಖೇಶ್ ಆ ಚೆಂಡನ್ನು ಹಿಡಿಯಲಿಲ್ಲ.
ಆದಾಗ್ಯೂ ಅದೃಷ್ಟ ಮುಖೇಶ್ ಅವರ ಕೈಹಿಡಿಯಿತು. ಮಾರ್ಷ್ ಆಡಿದ ಚೆಂಡು ಮುಖೇಶ್ ಅವರ ಕೈಗೆ ತಾಗಿ ನಾನ್ ಸ್ಟ್ರೈಕ್ ವಿಕೆಟ್ಗಳಿಗೆ ಬಡಿಯಿತು. ಇತ್ತ ನಾನ್ ಸ್ಟ್ರೈಕ್ನಲ್ಲಿದ್ದ ಪಂತ್, ಕ್ರೀಸ್ ಬಿಟ್ಟಿದ್ದ ಕಾರಣ ಅವರು ರನೌಟ್ ಆಗಬೇಕಾಯಿತು. ಹೀಗಾಗಿ ಪಂತ್ ತಮ್ಮ ಇನ್ನಿಂಗ್ಸ್ನಲ್ಲಿ 9 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಿತ 7 ರನ್ ಬಾರಿಸಿ ಔಟಾಗಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ