ದ್ವಿಶತಕ ಬಾರಿಸಿದರೂ ಪೃಥ್ವಿ ಶಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿಲ್ಲ… ಆಮೇಲೇನಾಯ್ತು?

Updated on: Oct 29, 2025 | 10:55 AM

Chandigarh vs Maharashtra: ಮೊದಲ ಇನಿಂಗ್ಸ್​ನಲ್ಲಿನ 104 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 464 ರನ್​ಗಳ ಗುರಿ ಪಡೆದ ಚಂಡೀಗಢ್​​ ತಂಡವನ್ನು 359 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಮಹಾರಾಷ್ಟ್ರ ತಂಡ ಯಶಸ್ವಿಯಾಗಿದೆ. ಈ ಮೂಲಕ 144 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಚಂಡೀಗಢ್​​ನ ಸೆಕ್ಟೆರ್-16 ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚಂಡೀಗಢ್​​ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ ಪರ ರುತುರಾಜ್ ಗಾಯಕ್ವಾಡ್ 116 ರನ್ ಬಾರಿಸಿದ್ದರು. ಈ ಶತಕದ ನೆರವಿನೊಂದಿಗೆ ಮಹಾರಾಷ್ಟ್ರ ತಂಡ ಮೊದಲ ಇನಿಂಗ್ಸ್​ನಲ್ಲಿ 313 ರನ್ ಪೇರಿಸಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಚಂಡೀಗಢ್​​ ತಂಡ 209 ರನ್​ಗಳಿಗೆ ಆಲೌಟ್ ಆಗಿತ್ತು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಮಹಾರಾಷ್ಟ್ರ ಪರ ಪೃಥ್ವಿ ಶಾ 156 ಎಸೆತಗಳಲ್ಲಿ 29 ಫೋರ್ ಹಾಗೂ 5 ಸಿಕ್ಸರ್​ಗಳೊಂದಿಗೆ ಅಜೇಯ 222 ರನ್ ಬಾರಿಸಿದ್ದರು. ಈ ಮೂಲಕ ಮಹಾರಾಷ್ಟ್ರ ತಂಡ 3 ವಿಕೆಟ್ ನಷ್ಟಕ್ಕೆ 359 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು.

ಮೊದಲ ಇನಿಂಗ್ಸ್​ನಲ್ಲಿನ 104 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 464 ರನ್​ಗಳ ಗುರಿ ಪಡೆದ ಚಂಡೀಗಢ್​​ ತಂಡವನ್ನು 359 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಮಹಾರಾಷ್ಟ್ರ ತಂಡ ಯಶಸ್ವಿಯಾಗಿದೆ. ಈ ಮೂಲಕ 144 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನ ಬಳಿಕ ದ್ವಿಶತಕ ಬಾರಿಸಿದ ಪೃಥ್ವಿ ಶಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿರಲಿಲ್ಲ. ಬದಲಾಗಿ ಮೊದಲ ಇನಿಂಗ್ಸ್​ನಲ್ಲಿ ಶತಕ ಸಿಡಿಸಿ ಮಹಾರಾಷ್ಟ್ರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರುತುರಾಜ್ ಗಾಯಕ್ವಾಡ್​ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗಿತ್ತು.

ಆದರೆ ಈ ಪ್ರಶಸ್ತಿಯನ್ನು ರುತುರಾಜ್ ಗಾಯಕ್ವಾಡ್ ತನ್ನ ಸಹ ಆಟಗಾರ ಪೃಥ್ವಿ ಶಾ ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು. ಇದೀಗ ಗಾಯಕ್ವಾಡ್ ಅವರ ನಡೆಗೆ ಬಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.