VIDEO: ಕೇವಲ 7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು

Updated on: Jul 27, 2025 | 10:55 AM

NZ vs SA T20: ಕೊನೆಯ ಓವರ್​ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬೇಕಿದದ್ದು 6 ಎಸೆತಗಳಲ್ಲಿ ಕೇವಲ 7 ರನ್​ಗಳು ಮಾತ್ರ. ಅಲ್ಲದೆ ಕ್ರೀಸ್​ನಲ್ಲಿ ಸ್ಫೋಟಕ ದಾಂಡಿಗ ಡೆವಾಲ್ಡ್ ಬ್ರೆವಿಸ್ ಹಾಗೂ ಜಾರ್ಜ್ ಲಿಂಡೆ ಇದ್ದರು. ಹೀಗಾಗಿ ಸೌತ್ ಆಫ್ರಿಕಾ ತಂಡದ ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ ಮ್ಯಾಟ್ ಹೆನ್ರಿ ಎಸೆದ ಕೊನೆಯ ಓವರ್​ನಲ್ಲಿ ಹೈ ಡ್ರಾಮಾಗೆ ಸಾಕ್ಷಿಯಾಯಿತು.

ಕ್ರಿಕೆಟ್ ಅಂಗಳದಲ್ಲಿ ಕ್ಯಾಚಸ್ ವಿನ್ಸ್ ಮ್ಯಾಚಸ್ ಎಂಬ ಮಾತಿದೆ. ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದಲ್ಲಿ ಮತ್ತೊಮ್ಮೆ ನಿರೂಪಿತವಾಗಿದೆ. ಝಿಂಬಾಬ್ವೆ, ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ನಡುವಣ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.

ಹರಾರೆಯ ಸ್ಪೋಟ್ಸ್ ಕ್ಲಬ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 19 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದ್ದರು.

ಇತ್ತ ಕೊನೆಯ ಓವರ್​ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬೇಕಿದದ್ದು 6 ಎಸೆತಗಳಲ್ಲಿ ಕೇವಲ 7 ರನ್​ಗಳು ಮಾತ್ರ. ಅಲ್ಲದೆ ಕ್ರೀಸ್​ನಲ್ಲಿ ಸ್ಫೋಟಕ ದಾಂಡಿಗ ಡೆವಾಲ್ಡ್ ಬ್ರೆವಿಸ್ ಹಾಗೂ ಜಾರ್ಜ್ ಲಿಂಡೆ ಇದ್ದರು. ಹೀಗಾಗಿ ಸೌತ್ ಆಫ್ರಿಕಾ ತಂಡದ ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ ಮ್ಯಾಟ್ ಹೆನ್ರಿ ಎಸೆದ ಕೊನೆಯ ಓವರ್​ನಲ್ಲಿ ಹೈ ಡ್ರಾಮಾಗೆ ಸಾಕ್ಷಿಯಾಯಿತು.

20ನೇ ಓವರ್​ನ ಮೊದಲ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ ಯಾವುದೇ ರನ್ ಗಳಿಸಲಿಲ್ಲ. 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿಯಾಗಿ ಬಾರಿಸಿದರು. ಇನ್ನೇನು ಚೆಂಡು ಬೌಂಡರಿ ಲೈನ್ ದಾಟಿ ಸಿಕ್ಸ್ ಆಗಲಿದೆ ಅನ್ನುವಷ್ಟರಲ್ಲಿ ಮೈಕಲ್ ಬ್ರೇಸ್​ವೆಲ್ ಬೌಂಡರಿ ಲೈನ್​ನಲ್ಲಿ ನಿಂತು ಅತ್ಯದ್ಭುತ ಕ್ಯಾಚ್ ಹಿಡಿದರು.

ಆ ಬಳಿಕ ಬಂದ ಕಾರ್ಬಿನ್ ಬಾಷ್ 3ನೇ ಎಸೆತದಲ್ಲಿ 2 ರನ್ ಕಲೆಹಾಕಿದರು. ಅದರಂತೆ ಕೊನೆಯ 3 ಎಸೆತಗಳಲ್ಲಿ 5 ರನ್ ಬೇಕಿತ್ತು. 4ನೇ ಎಸೆತದಲ್ಲಿ ಬಾಷ್ 1 ರನ್ ಓಡಿದರು. ಇತ್ತ ಸ್ಟ್ರೈಕ್ ಪಡೆದ ಜಾರ್ಜ್ ಲಿಂಡೆ 5ನೇ ಎಸೆತವನ್ನು ನೇರವಾಗಿ ಬಾರಿಸಿದರು. ಚೆಂಡು ಇನ್ನೇನು ಬೌಂಡರಿ ಲೈನ್ ದಾಟಬೇಕಿತ್ತು. ಈ ವೇಳೆ ಓಡಿ ಬಂದ ಡೇರಿಲ್ ಮಿಚೆಲ್ ಅದ್ಭುತ ಡೈವ್ ಕ್ಯಾಚ್ ಹಿಡಿದರು.

ಪರಿಣಾಮ ಕೊನೆಯ ಎಸೆತದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 4 ರನ್ ಬೇಕಿತ್ತು. ಈ ಎಸೆತವನ್ನು ಡಾಟ್ ಮಾಡುವ ಮೂಲಕ ಮ್ಯಾಟ್ ಹೆನ್ರಿ ನ್ಯೂಝಿಲೆಂಡ್ ತಂಡಕ್ಕೆ 3 ರನ್​ಗಳ ರೋಚಕ ಜಯ ತಂದುಕೊಟ್ಟರು.

ಸೌತ್ ಆಫ್ರಿಕಾ ತಂಡ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದ ಫಲಿತಾಂಶವನ್ನು ಅದ್ಭುತ ಫೀಲ್ಡಿಂಗ್ ಮೂಲಕ ಮೈಕಲ್ ಬ್ರೇಸ್​ವೆಲ್ ಹಾಗೂ ಡೇರಿಲ್ ಮಿಚೆಲ್ ಬದಲಿಸಿದರು. ಈ ಬದಲಿಸುವಿಕೆಯೊಂದಿಗೆ 3 ರನ್​ಗಳ ರೋಚಕ ಜಯದೊಂದಿಗೆ ನ್ಯೂಝಿಲೆಂಡ್ ತಂಡ ತ್ರಿಕೋನ ಸರಣಿ ಗೆದ್ದುಕೊಂಡಿದೆ.

 

Follow Us
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More