ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ
ಶಬರಿಮಲೆ ಅಯ್ಯಪ್ಪ ದೇಗುಲದ 4.5 ಕೆಜಿ ಚಿನ್ನ ಕಳವು ಪ್ರಕರಣದಲ್ಲಿ, ಕೇರಳ ಎಸ್ಐಟಿ ಬಳ್ಳಾರಿಯ ರೊದ್ದಂ ಜುವೆಲರ್ಸ್ ಮೇಲೆ ತೀವ್ರ ಶೋಧ ನಡೆಸಿದೆ. ಶಾಪ್ ಮಾಲೀಕ ಗೋವರ್ಧನ್ ಬಂಧಿತರಾಗಿದ್ದು, 475 ಗ್ರಾಂ ಚಿನ್ನ ಖರೀದಿಸಿದ ಆರೋಪ ಎದುರಿಸುತ್ತಿದ್ದಾರೆ. ಅಧಿಕಾರಿಗಳು ದಾಖಲೆಗಳು ಹಾಗೂ ಸಿಬ್ಬಂದಿಯನ್ನು ಪರಿಶೀಲಿಸುತ್ತಿದ್ದಾರೆ.
ಬಳ್ಳಾರಿ,ಡಿ.24: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ನಡೆದ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಶೇಷ ತನಿಖಾ ತಂಡ (ಎಸ್ಐಟಿ) ಬಳ್ಳಾರಿಯ ರೊದ್ದಂ ಜುವೆಲರ್ಸ್ ಮೇಲೆ ದಾಳಿ ನಡೆಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ. ಕೇರಳದ ಐವರು ಅಧಿಕಾರಿಗಳು ಜುವೆಲರಿ ಅಂಗಡಿಯನ್ನು ಸಂಪೂರ್ಣವಾಗಿ ಮುಚ್ಚಿ ಪರಿಶೀಲನೆ ನಡೆಸಿದ್ದಾರೆ. ಈ ಅಂಗಡಿಯ ಮಾಲೀಕ ಗೋವರ್ಧನ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿದೆ. ಗೋವರ್ಧನ್ ಅವರು ಕದ್ದ ಚಿನ್ನದಲ್ಲಿ ಸುಮಾರು 475 ಗ್ರಾಂ ಖರೀದಿಸಿದ್ದರು ಎಂಬ ಮಾಹಿತಿ ಎಸ್ಐಟಿಗೆ ಲಭ್ಯವಾಗಿದೆ. ಈ ಹಿಂದೆ 2019ರಲ್ಲಿ ಅಯ್ಯಪ್ಪ ದೇಗುಲದ ದ್ವಾರಪಾಲಕ ಮೂರ್ತಿಗಳಿಗೆ ಚಿನ್ನ ಲೇಪನ ಮಾಡುವ ಜವಾಬ್ದಾರಿಯನ್ನು ಉನ್ನಿಕೃಷ್ಣನ್ ಅವರಿಗೆ ವಹಿಸಲಾಗಿತ್ತು. ಆದರೆ ಹಿಂದಿರುಗಿಸುವಾಗ ಚಿನ್ನದ ತೂಕದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಪ್ರಕರಣದ ತನಿಖೆ ಇದೀಗ ತೀವ್ರಗೊಂಡಿದೆ. ಎಸ್ಐಟಿ ಅಧಿಕಾರಿಗಳು ಗೋವರ್ಧನ್ ಅವರ ಹೇಳಿಕೆಗಳು ಮತ್ತು ಜ್ಯುವೆಲರಿ ಅಂಗಡಿಯಲ್ಲಿ ಲಭ್ಯವಿರುವ ದಾಖಲೆಗಳನ್ನು ತಾಳೆ ಹಾಕಿ ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಅಂಗಡಿಯಲ್ಲಿ ಕೆಲಸ ಮಾಡುವ ಹತ್ತಕ್ಕೂ ಹೆಚ್ಚು ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿದೆ. ರೊದ್ದಂ ಜುವೆಲರ್ಸ್ ಮೇಲೆ ಮಾತ್ರವಲ್ಲದೆ, ಗೋವರ್ಧನ್ ಅವರ ಮನೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನ್ಯಾಯಾಲಯದ ಸೂಚನೆಯ ನಂತರ ಎಸ್ಐಟಿ ತಂಡವು ತನಿಖೆಯನ್ನು ಚುರುಕುಗೊಳಿಸಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
