ದಲಿತ ನಾಯಕರನ್ನು ಹತ್ತಿಕ್ಕುವ ಸಂಚು: ಶಾಸಕ ಚಂದ್ರು ಲಮಾಣಿ ಪರ ದಲಿತ ಮುಖಂಡರ ಆಕ್ರೋಶ
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ವಶಕ್ಕೆ ಪಡೆದಿದ್ದನ್ನು ದಲಿತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಸಂಚು ಎಂದು ಆರೋಪಿಸಿದ್ದು, ಶಾಸಕ ಲಮಾಣಿ ಮತ್ತು ಪಿ. ರಾಜೀವ್ ಅವರು ಲಂಬಾಣಿ ಹಾಗೂ ದಲಿತ ಸಮುದಾಯದ ಪ್ರಬಲ ಧ್ವನಿಗಳಾಗಿದ್ದಾರೆ. ಇಂತಹ ನಾಯಕರನ್ನು ಹತ್ತಿಕ್ಕುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಸಮುದಾಯಗಳು ಈ ಒತ್ತಡ ತಂತ್ರಗಳನ್ನು ಸಹಿಸುವುದಿಲ್ಲ, ಕಾನೂನು ಹೋರಾಟ ನಡೆಸುತ್ತವೆ ಎಂದು ಎಚ್ಚರಿಸಿದ್ದಾರೆ.
ಗದಗ, ಫೆ.21: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವುದನ್ನು ಖಂಡಿಸಿ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ದಲಿತ ಮುಖಂಡ ಹರೀಶ್, ಇದೊಂದು ರಾಜಕೀಯ ಪ್ರೇರಿತ ಸಂಚು ಎಂದು ಕಿಡಿಕಾರಿದ್ದಾರೆ. ಶಾಸಕ ಚಂದ್ರು ಲಮಾಣಿ ಮತ್ತು ಮಾಜಿ ಶಾಸಕ ಪಿ. ರಾಜೀವ್ ಅವರು ಲಂಬಾಣಿ ಹಾಗೂ ದಲಿತ ಸಮುದಾಯದ ಪ್ರಬಲ ಧ್ವನಿಯಾಗಿದ್ದಾರೆ. ಸಮುದಾಯಕ್ಕಾಗಿ ಹೋರಾಡುವ ಇಂತಹ ನಾಯಕರನ್ನು ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ದಲಿತ ಮತ್ತು ಹಿಂದುಳಿದ ವರ್ಗದ ನಾಯಕರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದ ಶಕ್ತಿಗಳು ಈ ರೀತಿಯ ಲೋಕಾಯುಕ್ತ ಟ್ರ್ಯಾಪ್‌ಗಳ ಮೂಲಕ ಅವರ ಚಾರಿತ್ರ್ಯಕ್ಕೆ ಧಕ್ಕೆ ತರುತ್ತಿವೆ. ಇಬ್ಬರು ಪ್ರಮುಖ ನಾಯಕರ ಮೇಲೆ ನಡೆಯುತ್ತಿರುವ ಈ ರೀತಿಯ ಒತ್ತಡದ ತಂತ್ರಗಳನ್ನು ಲಂಬಾಣಿ ಮತ್ತು ದಲಿತ ಸಮಾಜ ಸಹಿಸುವುದಿಲ್ಲ. ಇವರ ವಿರುದ್ಧದ ಸಂಚನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ