Shoaib Akhtar: ಭಾರತ ಕ್ರಿಕೆಟ್ ಅನ್ನೇ ಕೊಂದು ಹಾಕಿದ್ದಾರೆ..!
IND vs NZ: 2026 ಟಿ20 ವಿಶ್ವಕಪ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. 2007, 2024 ರಲ್ಲಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದ ಭಾರತ ಇದೀಗ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಈ ಸಾಧನೆ ಮಾಡಿದೆ.
T20 World Cup 2026: ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ತೆರೆ ಬಿದ್ದಿದೆ. ಈ ಬಾರಿ ಕೂಡ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಬಾರಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದಿದ್ದ ಟೀಮ್ ಇಂಡಿಯಾ ಈ ಸಲ ನ್ಯೂಝಿಲೆಂಡ್ ತಂಡಕ್ಕೆ ಸೋಲುಣಿಸಿದೆ. ಅದು ಸಹ ಬರೋಬ್ಬರಿ 96 ರನ್ಗಳ ಅಂತರದಿಂದ ಎಂಬುದು ವಿಶೇಷ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 255 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ 19 ಓವರ್ಗಳಲ್ಲಿ 156 ರನ್ಗಳಿಸಿ ಆಲೌಟ್ ಆಗಿದೆ.
ಈ ಮುಲಕ ಭಾರತ ತಂಡವು 96 ರನ್ಗಳ ಅಭೂತಪೂರ್ವ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರನೇ ಬಾರಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.
ಇತ್ತ ಭಾರತ ತಂಡವು ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ ಅತ್ತ ಪಾಕಿಸ್ತಾನ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ನಾಲಿಗೆ ಹರಿಬಿಟ್ಟಿದ್ದಾರೆ. ಅದು ಸಹ ವಿತಂಡವಾದ ಮುಂದಿಡುವ ಮೂಲಕ.
ಖಾಸಗಿ ಚಾನೆಲ್ವೊಂದರಲ್ಲಿ ಮಾತನಾಡಿದ ಶೊಯೆಬ್ ಅಖ್ತರ್, ಟೀಮ್ ಇಂಡಿಯಾವನ್ನು “ಶ್ರೀಮಂತ ಮಗು” ಎಂದು ಅಣಕಿಸಿದ್ದಾರೆ. ಭಾರತವು ಶ್ರೀಮಂತ ಮಗುವಿನಂತೆ ಆಡುತ್ತಿದೆ, ಎಲ್ಲರನ್ನೂ ಆಟಕ್ಕೆ ಕರೆಯುತ್ತದೆ. ಆದರೆ ತಾನೇ ಗೆಲ್ಲಬೇಕು ಎಂಬ ಹಠ ಹಿಡಿಯುತ್ತದೆ ಎಂದು ಟೀಕಿಸಿದ್ದಾರೆ.
ಬಿಸಿಸಿಐನ ಆರ್ಥಿಕ ಶಕ್ತಿಯು ಐಸಿಸಿ (ICC) ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದಾಗಿ ಪಂದ್ಯಾವಳಿಯ ಫಲಿತಾಂಶಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ ಎಂಬ ಪರೋಕ್ಷ ಆರೋಪ ಮಾಡಿದ್ದಾರೆ.
ಭಾರತದ ಪಂದ್ಯಗಳಿಗೆ ಫ್ಲ್ಯಾಟ್ ಪಿಚ್ಗಳನ್ನು ನಿರ್ಮಿಸಿದ್ದಾರೆ. ಈ ರೀತಿಯ ಪಿಚ್‌ಗಳು ಬೌಲರ್‌ಗಳಿಗೆ ಯಾವುದೇ ಸಹಾಯ ಮಾಡುವುದಿಲ್ಲ. ಇದು ಕ್ರಿಕೆಟ್‌ನ ನೈಜ ಸವಾಲನ್ನು ಕಡಿಮೆ ಮಾಡುತ್ತದೆ. ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯಗಳಿಗೆ ಇಂತಹ ಫ್ಲ್ಯಾಟ್ ಪಿಚ್ಗಳನ್ನು ಮಾಡಿ ಭಾರತ ಕ್ರಿಕೆಟ್ ಅನ್ನೇ ಕೊಂದು ಹಾಕಿದ್ದಾರೆ ಎಂದು ಶೊಯೆಬ್ ಅಖ್ತರ್ ಅಸಮಾಧಾನ ಹೊರಹಾಕಿದ್ದಾರೆ.
ಟೀಮ್ ಇಂಡಿಯಾ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ 250+ ಸ್ಕೋರ್ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ಗಳಲ್ಲಿ 253 ರನ್ ಕಲೆಹಾಕಿದ್ದರು. ಇನ್ನು ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 255 ರನ್ ಚಚ್ಚಿದ್ದರು.
ಇದನ್ನೇ ಪ್ರಸ್ತಾಪಿಸುವ ಮೂಲಕ ಶೊಯೆಬ್ ಅಖ್ತರ್, ಭಾರತವು ಫ್ಲ್ಯಾಟ್ ಪಿಚ್ಗಳನ್ನು ನಿರ್ಮಿಸಿ ಪಂದ್ಯಗಳನ್ನು ಗೆಲ್ಲಲು ನೋಡುತ್ತಿದ್ದಾರೆ. ಇದು ಒಂದಾರ್ಥದಲ್ಲಿ ಶ್ರೀಮಂತ ಮಗು ಇತರರನ್ನು ಪಂದ್ಯಕ್ಕೆ ಕರೆದು ಕೊನೆಗೆ ತಾನೇ ಗೆಲ್ಲುವುದಾಗಿದೆ. ಇಂತಹ ಪಿಚ್ಗಳ ಮೂಲಕ ಭಾರತ ಕ್ರಿಕೆಟ್ ಅನ್ನೇ ಕೊಂದು ಹಾಕಿದ್ದಾರೆ ಎಂದು ಶೊಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
