IND vs NZ: 37 ಎಸೆತಗಳಲ್ಲಿ 82 ರನ್..! 468 ದಿನಗಳ ಬಳಿಕ ಸೂರ್ಯ ಸ್ಫೋಟ
Suryakumar Yadav's Explosive Comeback: ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. 14 ತಿಂಗಳು ಮತ್ತು 468 ದಿನಗಳ ನಂತರ, ಸೂರ್ಯ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಅಂತಿಮವಾಗಿ 37 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದರು. ಅವರ ಕಳಪೆ ಫಾರ್ಮ್ ಬಗ್ಗೆ ಇದ್ದ ಕಳವಳ ದೂರಾಗಿದ್ದು, ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಇದು ದೊಡ್ಡ ಸಮಾಧಾನ ತಂದಿದೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದಿರುವ ಖುಷಿ ಒಂದೆಡೆಯಾದರೆ, ಕಳೆದೊಂದು ವರ್ಷದಿಂದ ಕಳಪೆ ಫಾರ್ಮ್ಗೆ ಸಿಲುಕಿ ಒಂದೇ ಒಂದು ಅರ್ಧಶತಕ ಬಾರಿಸಲಾಗದೆ ಬಸವಳಿದಿದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕೊನೆಗೂ ಅಬ್ಬರಿಸಿದ್ದಾರೆ. ಬರೋಬ್ಬರಿ 14 ತಿಂಗಳ ನಂತರ ಅಂದರೆ 468 ದಿನಗಳ ನಂತರ ಸೂರ್ಯಕುಮಾರ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.
ಸೂರ್ಯ ಈ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು. ಇದು ಸೂರ್ಯ ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 22 ನೇ ಅರ್ಧಶತಕವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಸೂರ್ಯ 14 ತಿಂಗಳು ಮತ್ತು 23 ಇನ್ನಿಂಗ್ಸ್‌ಗಳ ನಂತರ ತಮ್ಮ ಮೊದಲ ಅರ್ಧಶತಕ ಬಾರಿಸಿದರು.
ಕಳೆದ ಒಂದು ವರ್ಷದಿಂದ ಸೂರ್ಯ ರನ್ ಬರ ಎದುರಿಸುತ್ತಿದ್ದರು. ಇದರಿಂದಾಗಿ, ಐಸಿಸಿ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಸೂರ್ಯ ಅವರ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಆದಾಗ್ಯೂ, ನಿರ್ಣಾಯಕ ಕ್ಷಣದಲ್ಲಿ ಸೂರ್ಯ ಮತ್ತೆ ಫಾರ್ಮ್ಗೆ ಮರಳಿರುವುದು ಆಡಳಿತ ಮಂಡಳಿಗೆ ಸಂತಸ ತಂದಿದೆ. ಇನ್ನು ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಸೂರ್ಯ 37 ಎಸೆತಗಳಲ್ಲಿ 82 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿದ್ದವು.