ಪಾಕ್ ಆಟಗಾರನನ್ನು 2.34 ಕೋಟಿಗೆ ಖರೀದಿಸಿದ ಸನ್‌ರೈಸರ್ಸ್; ಭುಗಿಲೆದ್ದ ಆಕ್ರೋಶ

Updated on: Mar 12, 2026 | 8:07 PM

Kavya Maran The Hundred: ದಿ ಹಂಡ್ರೆಡ್ ಲೀಗ್ ಹರಾಜಿನಲ್ಲಿ ಕಾವ್ಯ ಮಾರನ್ ಒಡೆತನದ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ.ಗೆ ಖರೀದಿಸಿದೆ. ಈ ನಿರ್ಧಾರ ಭಾರತೀಯ ಮಾಲೀಕರಿಗೆ ಭಾರಿ ಟೀಕೆಗಳನ್ನು ತಂದಿದೆ. ಭಾರತೀಯ ಕಂಪನಿಗಳು ಪಾಕ್ ಆಟಗಾರರನ್ನು ಖರೀದಿಸುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಕಾವ್ಯ ಮಾರನ್ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ, ಕೆಲವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ.

ಮುಂಬರುವ ದಿ ಹಂಡ್ರೆಡ್ ಲೀಗ್​ಗೆ ಇಂದು ಹರಾಜು ನಡೆಯುತ್ತಿದೆ. ಈ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಕಂಪನಿಗಳು ಫ್ರಾಂಚೈಸಿಗಳನ್ನು ಖರೀದಿಸಿವೆ. ಹೀಗಾಗಿ ಈ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರರು ಆಡುವುದರಿಂದ ಭಾರತೀಯ ಒಡೆತನದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರನನ್ನು ಖರೀದಿಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿತ್ತು. ಏಕೆಂದರೆ ಪಾಕ್ ಆಟಗಾರರನ್ನು ಖರೀದಿಸಿದರೆ, ಭಾರತೀಯರ ಕೋಪಕ್ಕೆ ಗುರಿಯಾಗುವುದು ಖಚಿತವಾಗಿತ್ತು. ಆದಾಗ್ಯೂ ಕಾವ್ಯ ಮಾರನ್ ಒಡೆತನದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ, ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ತನ್ನ ತಂಡಕ್ಕೆ ಖರೀದಿ ಮಾಡಿದೆ. ಪಾಕಿಸ್ತಾನಿ ಆಟಗಾರನನ್ನು ಖರೀದಿಸಿರುವ ಕಾವ್ಯ ಮಾರನ್ ಅವರ ಈ ನಿರ್ಧಾರವು ಈಗ ವಿವಾದವನ್ನು ಹುಟ್ಟುಹಾಕಿದೆ.

ಕಾವ್ಯ ಮಾರನ್ ಫ್ರಾಂಚೈಸಿ, ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ.ಗೆ ಖರೀದಿಸಿದೆ. ಅಬ್ರಾರ್ ಅಹ್ಮದ್​ಗಾಗಿ ಟ್ರೆಂಟ್ ರಾಕೆಟ್ಸ್ ಹಾಗೂ ಸನ್‌ರೈಸರ್ಸ್ ಲೀಡ್ಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕಾವ್ಯ ಮಾರನ್, ಅಬ್ರಾರ್ ಅಹ್ಮದ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾವ್ಯ ಮಾರನ್ ಪಾಕ್ ಆಟಗಾರನನ್ನು ಖರೀದಿಸಿದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟೀಕೆಗಳ ಮಳೆ ಶುರುವಾಗಿದೆ. ಕಾವ್ಯ ಮಾರನ್ ಮತ್ತು ಅವರ ದಿ ಹಂಡ್ರೆಡ್ ಫ್ರಾಂಚೈಸಿಯ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾತೆ. ಕೆಲವರು ಈ ನಿರ್ಧಾರವನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆಯುತ್ತಿದ್ದರೆ, ಇತರರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 12, 2026 08:05 PM
Follow Us