‘ನಮ್ಮ ತಂಡದ ಸೋಲಿಗೆ ನಮ್ಮವರೇ ಕಾರಣ’: ಆಫ್ರಿಕಾ ನಟಿಯ ಆಕ್ರೋಶ; ವಿಡಿಯೋ
ICC Women's World Cup 2025: 2025ರ ಐಸಿಸಿ ಮಹಿಳಾ ವಿಶ್ವಕಪ್ ಅನ್ನು ಭಾರತ ಗೆದ್ದುಕೊಂಡಿದೆ. ನವಿ ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಸಾಧನೆಗೆ ಇಡೀ ಭಾರತದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ದಕ್ಷಿಣ ಆಫ್ರಿಕಾ ಸೋತಿದ್ದಕ್ಕೆ ಆ ದೇಶದ ನಟಿ ತಂಜಾ ತಮ್ಮ ದೇಶದ ಅಧಿಕಾರಿಗಳು ಮತ್ತು ಮಾಜಿ ಕ್ರಿಕೆಟಿಗರು ತಂಡಕ್ಕೆ ಬೆಂಬಲ ನೀಡದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಸಿಕ್ಕ ಬೆಂಬಲವನ್ನು ಉದಾಹರಿಸಿದ್ದಾರೆ.
ಒಂದು ತಿಂಗಳಿಗೂ ಹೆಚ್ಚು ಸಮಯ ನಡೆದ 2025 ರ ಐಸಿಸಿ ಮಹಿಳಾ ವಿಶ್ವಕಪ್ ಕೊನೆಗೂ ಮುಕ್ತಾಯಗೊಂಡಿದೆ. ನವಿ ಮುಂಬೈನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯದಲ್ಲಿ ಮಹಿಳಾ ಕ್ರಿಕೆಟ್ಗೆ ಹೊಸ ಚಾಂಪಿಯನ್ ಸಿಕ್ಕಿದೆ. ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ. ತಂಡದ ಈ ಸಾಧನೆಗೆ ಇಡೀ ಭಾರತಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೆಯೇ ಫೈನಲ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಆದಾಗ್ಯೂ ದಕ್ಷಿಣ ಆಫ್ರಿಕಾ ತಂಡದ ಸೋಲಿಗೆ ತಮ್ಮದೇ ದೇಶವನ್ನು ದೂಷಿಸಿರುವ ದಕ್ಷಿಣ ಆಫ್ರಿಕಾದ ನಟಿ ಮತ್ತು ಬರಹಗಾರ್ತಿ ತಂಜಾ, ಆಫ್ರಿಕಾದ ಸ್ಟಾರ್ ಕ್ರಿಕೆಟಿಗರು ಮತ್ತು ಅಧಿಕಾರಿಗಳ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹರಿಬಿಡುವ ಮೂಲಕ ಅಸಮಾಧಾನ ಹೊರಹಾಕಿರುವ ಅವರು, ‘ಭಾರತ, ನೀವು ಈ ವಿಶ್ವಕಪ್ ಗೆದ್ದಿದ್ದೀರಿ. ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಆದರೆ ಅದಕ್ಕೂ ಮೊದಲು ನಾನು ಏಕೆ ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ ಎಂಬುದನ್ನು ಹೇಳುತ್ತೇನೆ. ಅದಕ್ಕೆ ಕಾರಣ ನೀವೇ. ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿವಿಎಸ್ ಲಕ್ಷ್ಮಣ್ರಂತಹ ಮಾಜಿ ಲೆಜೆಂಡರಿ ಆಟಗಾರರು ನಿಮ್ಮನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ದಕ್ಷಿಣ ಆಫ್ರಿಕಾದಿಂದ ಯಾರು ಬಂದಿದ್ದರು? ಯಾರೂ ಇಲ್ಲ!.
ನಮ್ಮ ಮಾಜಿ ಕ್ರಿಕೆಟಿಗರು ಎಲ್ಲಿದ್ದರು, ಅವರನ್ನು ನಾವು ತುಂಬಾ ಪ್ರೀತಿಸುತ್ತೇವೆ.. ಬಹುಶಃ ಈ ಟೂರ್ನಮೆಂಟ್ ಅವರಿಗೆ ಸಾಕಷ್ಟು ಹೈಪ್ರೊಫೈಲ್ ಆಗಿರಲಿಲ್ಲ ಎನಿಸುತ್ತೆ. ಹಾಗಾಗಿ ಅವರ್ಯಾರು ಬರಲಿಲ್ಲ. ನಮ್ಮ ಕ್ರೀಡಾ ಸಚಿವರು ಕೂಡ ಕ್ರೀಡಾಂಗಣಕ್ಕೆ ಬಂದಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ ನಮ್ಮ ಹುಡುಗಿಯರು ಕಷ್ಟಪಟ್ಟು ಕೆಲಸ ಮಾಡಿದರು, ಅವರು ತುಂಬಾ ಚೆನ್ನಾಗಿ ಆಡಿದರು. ಆದರೆ ಯಾರೂ ಅವರನ್ನು ಬೆಂಬಲಿಸದಿದ್ದಾಗ ಅವರಿಗೆ ಹೇಗನಿಸಬೇಡ? ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ