ಬಾಗ್ದಾದ್: ಇರಾಕ್ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಕನಿಷ್ಠ 6 ಮಂದಿ ಪ್ರತಿಭಟನಾಕಾರರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಸುಮಾರು 158ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ:
ಸರ್ಕಾರವನ್ನು ಉಚ್ಚಾಟಿಸಬೇಕೆಂದು ಇರಾಕ್ ರಾಜಧಾನಿ ಬಾಗ್ದಾದ್ ಸೇರಿದಂತೆ ದಕ್ಷಿಣ ಭಾಗದ ಹಲವು ನಗರಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗಿವೆ. ಕಳೆದ ಹಲವು ದಿನಗಳಿಂದ ನಾಸಿರಿಯಾದಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು. ಸೇತುವೆಗಳ ಮೇಲೆ ರಾತ್ರಿಯಿಡೀ ಪ್ರತಿಭಟನಾಕಾರರು ನೆರೆದಿದ್ದರು. ಹೀಗಾಗಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ಬಳಿಕವೂ ಪ್ರತಿಭಟನೆಗಳು ಮುಂದುವರೆದಿದ್ದು, ಕೆಲ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.
ದೇಶದ ಆರ್ಥಿಕ ಸುಧಾರಣೆ, ಭ್ರಷ್ಟಾಚಾರ ತಡೆಗಟ್ಟುವಿಕೆ, ಉತ್ತಮ ಆರೋಗ್ಯ, ಉದ್ಯೋಗ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಕ್ಟೋಬರ್ ತಿಂಗಳಿಂದಲೂ ಇರಾಕ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
Published On - 10:43 pm, Sun, 24 November 19