ಚೀನಾದಲ್ಲಿರುವ ಅಫ್ಘಾನಿಸ್ತಾನದ (Afghanistan) ರಾಯಭಾರಿ ಜಾವಿದ್ ಅಹ್ಮದ್ ಕ್ವಾಮ್ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚೀನಾದಿಂದ ವಾಪಸ್ ಬಂದಿದ್ದಾರೆ. ಕ್ವಾಮ್ ತಮ್ಮ ಹುದ್ದೆಯನ್ನು ಜನವರಿ ಪ್ರಾರಂಭದಲ್ಲೇ ಬಿಟ್ಟಿದ್ದು, ಟ್ವೀಟ್ ಮಾಡಿದ್ದಾರೆ. ನನ್ನ ಗೌರವಾನ್ವಿತ ಹುದ್ದೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇಷ್ಟುದಿನ ಚಿನಾದಲ್ಲಿ ಅಫ್ಘಾನಿಸ್ತಾನ ರಾಯಭಾರಿಯಾಗಿದ್ದ ನನಗೆ ನನ್ನ ಕೆಲಸದ ಬಗ್ಗೆ ಗೌರವ ಇದೆ. ಆದರೆ ಈಗ ಹುದ್ದೆ ಬಿಡುತ್ತಿರಲು ಹಲವು ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿತ ಕಾರಣಗಳಿವೆ. ಆದರೆ ಅವುಗಳನ್ನೆಲ್ಲ ಇಲ್ಲಿ ಹೇಳುವುದಿಲ್ಲ. ನಾನು ನನ್ನ ಅಧಿಕಾರವನ್ನು ಹಸ್ತಾಂತರ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಮೂಲಗಳ ಪ್ರಕಾರ ಇವರು ಇದೀಗ ಹುದ್ದೆ ಬಿಟ್ಟಿರುವುದಕ್ಕೆ ಕಾರಣ ವೇತನ ಸಿಗದೆ ಇರುವುದು. ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದಾಗಿನಿಂದಲೂ ಇವರಿಗೆ ನಯಾಪೈಸೆ ವೇತನ ಸಿಕ್ಕಿಲ್ಲ. ಕೇವಲ ಇವರಷ್ಟೇ ಅಲ್ಲ, ವಿವಿಧ ದೇಶಗಳಲ್ಲಿರುವ ಇನ್ನೂ ಹಲವು ರಾಯಭಾರಿಗಳಿಗೆ ಸಂಬಳ ಇಲ್ಲ. ಅವರಲ್ಲಿ ಒಂದಷ್ಟು ಮಂದಿ ಕೆಲಸ ತೊರೆದಿದ್ದಾರೆ ಎಂದೂ ಹೇಳಲಾಗಿದೆ.
The end to an honorable responsibility: I quit my job as Ambassador. It was an honor to represent AFG ?? and my people.There are many reasons, personal and professional, but I don’t want to mention them here. I have handed over everything smoothly through a handover note. pic.twitter.com/a4A6y7yOBP
— Javid Ahmad Qaem (@JavidQaem) January 10, 2022
ಚೀನಾ ದೇಶ ಅಫ್ಘಾನಿಸ್ತಾದೊಂದಿಗೆ ಸಣ್ಣ ಗಡಿಯನ್ನು ಹಂಚಿಕೊಂಡಿದೆ. ಹಾಗೇ, ತಾಲಿಬಾನ್ ಆಡಳಿತ ವಾಪಸ್ ಬಂದಿದ್ದನ್ನು ಸ್ವಾಗತಿಸಿದ ದೇಶಗಳಲ್ಲಿ ಅದೂ ಒಂದು. ಆಗಸ್ಟ್ನಲ್ಲಿ ಅಫ್ಘಾನ್ನಲ್ಲಿ ಉಂಟಾದ ಅಸ್ಥಿರತೆ ವೇಳೆ, ಚೀನಾ ಮಾನವೀಯತೆಯ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಅಫ್ಘಾನಿಸ್ತಾನಕ್ಕೆ ಪೂರೈಕೆ ಮಾಡಿದೆ. ಇದೀಗ ಕ್ವಾಮ್ ಸ್ಥಾನಕ್ಕೆ ಇನ್ನೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದ್ದರೂ, ಅಫ್ಘಾನಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಮಧ್ಯೆ ಚೀನಾದ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಕೂಡ, ಅಫ್ಘಾನಿಸ್ತಾನದ ರಾಯಭಾರಿ ಕ್ವಾಮ್ ಅವರು ರಾಜೀನಾಮೆ ನೀಡಿದ್ದನ್ನು ತಿಳಿಸಿದ್ದಾರೆ. ಆದರೆ ಅವರು ಯಾಕೆ ಬಿಟ್ಟಿದ್ದಾರೆ, ನಂತರ ಎಲ್ಲಿಗೆ ಹೋದರು ಎಂಬುದನ್ನು ಅವರೂ ಹೇಳಿಲ್ಲ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಿದ್ದನ್ನು ಚೀನಾ ಸ್ವಾಗತಿಸಿದರೂ ಕೂಡ ಸದ್ಯ ಆ ಸರ್ಕಾರ ಅಧಿಕೃತವೆಂದು ಚೀನಾ ಆಗಲೀ, ಉಳಿದ ಅಂತಾರಾಷ್ಟ್ರೀಯ ಸರ್ಕಾರಗಳಾಗಲೀ ಒಪ್ಪಿಕೊಂಡಿಲ್ಲ. ತಾಲಿಬಾನ್ ಸರ್ಕಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡಲಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇರಲಾದ ಕಠಿಣ ನಿರ್ಬಂಧಗಳಿಂದಾಗಿ ಅಫ್ಘಾನ್ಗೆ ಹಣಕಾಸಿನ ನೆರವು ಬರುತ್ತಿಲ್ಲ. ಹೀಗಾಗಿ ಈ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಈ ಮಧ್ಯೆ ಹಿಂದಿನ ಅಫ್ಘಾನ್ ಸರ್ಕಾರವಿದ್ದಾಗ ಕೆಲಸ ಮಾಡುತ್ತಿದ್ದ ಅದೆಷ್ಟೋ ಮಂದಿ ತಾಲಿಬಾನಿಗಳು ಅಧಿಕಾರಕ್ಕೆ ಬರುತ್ತಿದ್ದಂತೆ ಜೀವಭಯದಿಂದಲೇ ಪರಾರಿಯಾಗಿದ್ದಾರೆ. ಅಫ್ಘಾನಿಸ್ತಾನದ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಕೊನೆಯಾಗಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ದೇಶಕ್ಕೆ ಆರ್ಥಿಕ ನೆರವು ನೀಡುವಂತೆ ಬೀಜಿಂಗ್ ಕರೆ ನೀಡಿದೆ.
ಇದನ್ನೂ ಓದಿ: 50 ಆರೋಗ್ಯ ಕೇಂದ್ರಗಳಲ್ಲಿ 40 ಕಡೆ ಆಂಬುಲೆನ್ಸ್ ಇಲ್ಲ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು