ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ದಿನದಿನಕ್ಕೂ ಏರುತ್ತಲೇ ಇದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರು ಆಯ್ಕೆಯ ಕನಸು ಹೊತ್ತಿದ್ದರೆ ಇತ್ತ ಡೆಮೋಕ್ರಾಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ ತೋರಿಸಿದ್ದಾರೆ. ಈ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಘಡ ಒಂದರಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಭಾನುವಾರ ಅಧ್ಯಕ್ಷ ಟ್ರಂಪ್ರ ಅಧಿಕೃತ ವಿಮಾನ ಏರ್ ಫೋರ್ಸ್ ಒನ್ಗೆ ಸಣ್ಣದೊಂದು ಡ್ರೋನ್ ಡಿಕ್ಕಿಯಾಗುವಷ್ಟು ನಿಕಟವಾಗಿ ಹಾದು ಹೋಯಿತು ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಿಬ್ಬಂದಿಯ ಪ್ರಕಾರ ವಾಷಿಂಗ್ಟನ್ ಏರ್ಪೋರ್ಟ್ನಲ್ಲಿ ಅಧ್ಯಕ್ಷರ ವಿಮಾನ ಲ್ಯಾಂಡ್ ಆಗುವ ವೇಳೆ ಈ ಘಟನೆ ಸಂಭವಿಸಿದೆ.
ಪ್ಲಸ್ ಆಕಾರದ ಈ ಹಳದಿ ಮತ್ತು ಕಪ್ಪು ಬಣ್ಣದ ಡ್ರೋನ್ ವಿಮಾನದ ಬಲಭಾಗಕ್ಕೆ ತಾಗುವಷ್ಟು ಹತ್ತಿರವಾಗಿ ಹಾದು ಹೋಯಿತು ಎಂದು ತಿಳಿದುಬಂದಿದೆ. ಸದ್ಯ, ಘಟನೆ ಕುರಿತು ಅಮೆರಿಕಾ ಅಧ್ಯಕ್ಷರ ಭದ್ರತಾ ಪಡೆ ಸೀಕ್ರೆಟ್ ಸರ್ವೀಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವೈಮಾನಿಕ ತಜ್ಞರ ಪ್ರಕಾರ ಅಷ್ಟು ಪುಟ್ಟ ಗಾತ್ರದ ಡ್ರೋನ್ ವಿಮಾನಕ್ಕೆ ತಾಗಿದ್ದರೆ ಯಾವುದೇ ಅಪಾಯವಿರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಒಂದು ವೇಳೆ ಏರ್ ಫೋರ್ಸ್ ಒನ್ನ ಕಾಕ್ಪಿಟ್ಗೆ ಅಥವಾ ಇಂಜಿನ್ಗೆ ತಾಗಿದ್ದರೆ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಂಡಿನ ದಾಳಿ, ಅಧ್ಯಕ್ಷ ಟ್ರಂಪ್ರನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದ ಭದ್ರತಾಧಿಕಾರಿಗಳು