James Webb Space Telescope Launch: ವಿಶ್ವದ ಅತ್ಯಂತ ದೊಡ್ಡ, ಪ್ರಭಾವಶಾಲಿ ದೂರದರ್ಶಕ ಜೇಮ್ಸ್​ ವೆಬ್​​ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ

| Updated By: Lakshmi Hegde

Updated on: Dec 25, 2021 | 6:56 PM

ಜೇಮ್ಸ್ ವೆಬ್​​ ಟೆಲಿಸ್ಕೋಪ್​​ನ ದರ್ಪಣದ ವ್ಯಾಸ 6.5 ಮೀಟರ್ ಇದೆ. ವೈಜ್ಞಾನಿಕ ಕಾರಣಕ್ಕಾಗಿ ತೆಳುವಾಗಿ ಚಿನ್ನದ ಲೇಪನ ಮಾಡಲಾಗಿದೆ. ಹಾಗೇ, ಈ ದರ್ಪಣವನ್ನು 18 ಚಿಕ್ಕ ಷಡ್ಭುಜೀಯ ದರ್ಪಣಗಳಿಂದ ತಯಾರಿಸಲಾಗಿದೆ ಎಂದು ನಾಸಾ ಮಾಹಿತಿ ನೀಡಿದೆ.

James Webb Space Telescope Launch: ವಿಶ್ವದ ಅತ್ಯಂತ ದೊಡ್ಡ, ಪ್ರಭಾವಶಾಲಿ ದೂರದರ್ಶಕ ಜೇಮ್ಸ್​ ವೆಬ್​​ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ
ಸಾಂಕೇತಿಕ ಚಿತ್ರ
Follow us on

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇಂದು ಸಂಜೆ 5.50ರ ಹೊತ್ತಿಗೆ ಜೇಮ್ಸ್​ ವೆಬ್​ ಬಾಹ್ಯಾಕಾಶ ದೂರದರ್ಶಕ (JWST-James Webb Space Telescope)ವನ್ನು ಫ್ರಾನ್ಸ್​ನ ಫ್ರೆಂಚ್​ ಗಯಾನಾದಿಂದ ಉಡಾವಣೆ ಮಾಡಿದೆ. ನಾಸಾ ಇದುವರೆಗೆ ನಿರ್ಮಿಸಿದ ಅತ್ಯಂತ ದೊಡ್ಡ ಟೆಲಿಸ್ಕೋಮ್​ ಇದಾಗಿದ್ದು, ಕ್ರಿಸ್​ಮಸ್​ ದಿನವೇ ಉಡಾವಣೆಗೊಳಿಸಲಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪ್​ ಇದಾಗಿದ್ದು, 1990ರ ಏಪ್ರಿಲ್​ನಲ್ಲಿ ಉಡಾವಣೆಯಾಗಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಹಬಲ್​ ಸ್ಪೇಸ್​ ಟೆಲಿಸ್ಕೋಪ್​​ನ ತರುವಾಯದ ದೂರದರ್ಶಕವೆನಿಸಿದ್ದು, ಅದಕ್ಕಿಂತಲೂ ಪ್ರಬಲವಾಗಿದೆ. ಅಂದಹಾಗೆ, ಜೇಮ್ಸ್​ ಬೆಬ್​ ಬಾಹ್ಯಾಕಾಶ ಟೆಲಿಸ್ಕೋಪ್​​ನ್ನು ಭೂಮಿಯಿಂದ 15 ಮಿಲಿಯನ್​ ಕಿಲೋಮೀಟರ್​(930,000 ಮೈಲುಗಳು)ದೂರದಲ್ಲಿ ಸ್ಥಿರಗೊಳಿಸಲಾಗುವುದು. ಅಲ್ಲಿಂದ ವಿಶ್ವವನ್ನು ಇದು ಅವಲೋಕಿಸಲಿದೆ ಎಂದು ನಾಸಾ ತಿಳಿಸಿದೆ.

ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್​,​  ಉಡಾವಣೆ ಬೆನ್ನಲ್ಲೇ ಟ್ವೀಟ್ ಮಾಡಿರುವ ನಾಸಾ ವೆಬ್​ ಟೆಲಿಸ್ಕೋಪ್​, ಜೇಮ್ಸ್ ವೆಬ್​ ದೂರದರ್ಶಕವನ್ನು ಹೊತ್ತೊಯ್ದ ಏರಿಯನ್​ 5 ರಾಕೆಟ್​​ನಿಂದ ಎರಡು ಸಾಲಿಡ್ ರಾಕೆಟ್​ ಬೂಸ್ಟರ್​​ಗಳು ಪ್ರತ್ಯೇಕಿಸಲ್ಪಡಿಲಿವೆ ಮತ್ತು ಅವು ಸಾಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಮೂಲಕ ಭೂಮಿ ತಲುಪಲಿವೆ ಎಂದು ತಿಳಿಸಿದೆ. ಹಾಗೇ, ಇನ್ನೊಂದು ಟ್ವೀಟ್ ನಲ್ಲಿ, ಅಂದರೆ, ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್ ಉಡಾವಣೆಗೊಂಡ 11 ನಿಮಿಷಕ್ಕೆ ಟ್ವೀಟ್ ಮಾಡಿ, ವೆಬ್​​ನ್ನು ಹೊತ್ತೊಯ್ದ ಮುಖ್ಯ ರಾಕೆಟ್​ ಏರಿಯನ್​ 5ನ ಮುಖ್ಯ ಎಂಜಿನ್​ಗಳು ಕಡಿತಗೊಂಡಿವೆ. ಮುಖ್ಯ ಭಾಗ ಪ್ರತ್ಯೇಕಗೊಂಡಿದ್ದು, ಹೊತ್ತಿ ಉರಿದಿದೆ. ಇದು ಸುಮಾರು 16 ನಿಮಿಷಗಳ ಕಾಲ ಹೊತ್ತಿ ಉರಿಯುತ್ತದೆ. ಇನ್ನು ವೆಬ್​ ಗಂಟೆಗೆ 25 ಸಾವಿರ ಮೈಲುಗಳಷ್ಟು ವೇಗದಲ್ಲಿ ಚಲಿಸುತ್ತದೆ ಎಂದು ತಿಳಿಸಿದೆ.

ಈ ಜೇಮ್ಸ್ ವೆಬ್​ ಬಾಹ್ಯಾಕಾಶ ಟೆಲಿಸ್ಕೋಪ್​ ಒಟ್ಟು ನಾಲ್ಕು ಪ್ರಮುಖ ವೈಜ್ಞಾನಿಕ ಉಪಕರಣಗಳನ್ನು ಕೊಂಡೊಯ್ದಿದೆ. ನಿಯರ್​ ಇನ್​ಫ್ರಾರೆಡ್​ ಕ್ಯಾಮರಾ (ಸಮೀಪ-ಅತಿಗೆಂಪು ಕ್ಯಾಮರಾ), ನಿಯರ್​ ಇನ್​ಫ್ರಾರೆಡ್​ ಸ್ಪೆಕ್ಟೋಗ್ರಾಫ್​, ಮಿಡ್​ ಇನ್​ಫ್ರಾರೆಡ್​ ಉಪಕರಣ ಮತ್ತು ನಿಯರ್ ಇನ್​ಫ್ರಾರೆಡ್​ ಇಮೇಜರ್ ಮತ್ತು ಸ್ಲಿಟ್‌ಲೆಸ್ ಸ್ಪೆಕ್ಟ್ರೋಗ್ರಾಪ್​​ಗಳು ಈ ಉಪಕರಣಗಳಾಗಿವೆ. ಬ್ರಹ್ಮಾಂಡದ ಮೊದಲ ಗೆಲಾಕ್ಸಿಯಲ್ಲಿ ಇದುವರೆಗೂ ಪತ್ತೆಯಾಗದೆ ಉಳಿದ ರಚನೆಗಳನ್ನು ಈ ಉಪಕರಣಗಳ ಸಹಾಯದಿಂದ ಜೇಮ್ಸ್​ ವೆಬ್​ ಟೆಲಿಸ್ಕೋಪ್​ ಪತ್ತೆ ಹಚ್ಚಲಿದೆ. ಅಷ್ಟೇ ಅಲ್ಲ, ನಕ್ಷತ್ರ ಮತ್ತು ಗ್ರಹ ವ್ಯವಸ್ಥೆಗಳು ರೂಪುಗೊಳ್ಳುವ ಧೂಳುಮೋಡದ ಒಳಗೆ ಇದು ಗಮನಹರಿಸಲಿದೆ.

ಈ ಹಿಂದೆ ಬ್ರಹ್ಮಾಂಡದ ಅಧ್ಯಯನಕ್ಕಾಗಿ ಕಳಿಸಲಾದ ಹಬಲ್​ ಟೆಲಿಸ್ಕೋಪ್​​ನ ಬದಲಿಸಲೆಂದು ಜೇಮ್ಸ್ ವೆಬ್​ ಟೆಲಿಸ್ಕೋಪ್​ ಉಡಾವಣೆ ಮಾಡಿದ್ದಲ್ಲ. ಜೇಮ್ಸ್ ವೆಬ್​​ ಟೆಲಿಸ್ಕೋಪ್​​ನ ದರ್ಪಣದ ವ್ಯಾಸ 6.5 ಮೀಟರ್ ಇದೆ. ವೈಜ್ಞಾನಿಕ ಕಾರಣಕ್ಕಾಗಿ ತೆಳುವಾಗಿ ಚಿನ್ನದ ಲೇಪನ ಮಾಡಲಾಗಿದೆ. ಹಾಗೇ, ಈ ದರ್ಪಣವನ್ನು 18 ಚಿಕ್ಕ ಷಡ್ಭುಜೀಯ ದರ್ಪಣಗಳಿಂದ ತಯಾರಿಸಲಾಗಿದೆ. ಅಂದಹಾಗೆ, ಹಬಲ್​ ಟೆಲಿಸ್ಕೋಪ್​​ನ ದರ್ಪಣದ ವ್ಯಾಸ 2.4 ಮೀಟರ್​ಗಳು ಎಂದು ನಾಸಾ ತಿಳಿಸಿದೆ. ಹಾಗೇ, 1990ರಲ್ಲಿ ಉಡಾವಣೆಯಾದ ಹಬಲ್​ ಟೆಲಿಸ್ಕೋಪ್​ ನೇರಳಾತೀತ ತರಂಗದಿಂದ ಬ್ರಹ್ಮಾಂಡ ಅಧ್ಯಯನ ಮಾಡುತ್ತಿದ್ದು, ಭೂಮಿಯ ಹತ್ತಿರವೇ ಇದೆ. ಆದರೆ ಜೇಮ್ಸ್ ವೆಬ್​ ಟೆಲಿಸ್ಕೋಪ್​ ಅತಿಗೆಂಪು ತರಂಗಗಳ ಮೂಲಕ ಅಧ್ಯಯನ ಮಾಡುತ್ತದೆ ಎಂದೂ ನಾಸಾ ಮಾಹಿತಿ ನೀಡಿದೆ.

ಇದನ್ನೂ ಓದಿ: ಬಿಗಿ ಭದ್ರತೆಯಿದ್ದ ತಿಹಾರ್ ಜೈಲಿನೊಳಗೆ ಎಂಟೇ ದಿನದಲ್ಲಿ ಐವರು ಕೈದಿಗಳ ಸಾವು; ತನಿಖೆಗೆ ಆದೇಶ

Published On - 6:55 pm, Sat, 25 December 21