ಆಸ್ಟ್ರೇಲಿಯಾದ ಪರ್ತ್ನಲ್ಲಿ ಹೊಸದಾಗಿ ಒಂದು ಕೊರೊನಾ ಕೇಸ್ ಪತ್ತೆ ಆಗಿದೆ. ಇದರಿಂದ ಆತಂಕಗೊಂಡಿರುವ ಅಲ್ಲಿನ ಸ್ಥಳೀಯ ಆಡಳಿತ ಐದು ದಿನ ಲಾಕ್ಡೌನ್ ಘೋಷಣೆ ಮಾಡಿದೆ. ಅಷ್ಟೇ ಅಲ್ಲ, ನಿಯಮ ಮೀರಿದವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ್ದಾರೆ.
ಪರ್ತ್ನಲ್ಲಿರುವ ಕ್ವಾರಂಟೈನ್ ಕೇಂದ್ರದ ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಸ್ಥಳೀಯ ಆಡಳಿತ ಲಾಕ್ಡೌನ್ ಮೊರೆ ಹೋಗಿದೆ. ಭಾನುವಾರದಿಂದಲೇ ಲಾಕ್ಡೌನ್ ನಿಯಮ ಜಾರಿಗೆ ಬಂದಿದೆ. ಹೀಗಾಗಿ, ಮುಂಜಾನೆ ವ್ಯಾಯಾಮ, ಆರೋಗ್ಯ ಸೇವೆ, ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮಾತ್ರ ಜನರು ಹೊರಗೆ ಬರಹುದಾಗಿದೆ. ಇನ್ನು, ಪರ್ತ್ನ ಶಾಲೆಗಳಿಗೆ ಐದು ದಿನ ಬರದಂತೆ ಮಕ್ಕಳಿಗೆ ಸೂಚಿಸಲಾಗಿದ್ದು, ಆನ್ಲೈನ್ ಮೂಲಕ ತರಗತಿ ನಡೆಯಲಿದೆ.
ಕೊರೊನಾ ವೈರಸ್ ಹರಡದಂತೆ ನೋಡಿಕೊಳ್ಳಲು ಪರ್ತ್ನಲ್ಲಿ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಭದ್ರತಾ ಸಿಬ್ಬಂದಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವ ನಿಟ್ಟಿನಲ್ಲೂ ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ.
ಆಸ್ಟ್ರೇಲಿಯಾದ ಜನಸಂಖ್ಯೆ ಕೇವಲ 2.5 ಕೋಟಿ. ಈ ಪೈಕಿ 28,800 ಜನರಿಗೆ ಕೊರೊನಾ ದೃಢವಾಗಿದೆ. 909 ಜನರು ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಆಸ್ಟ್ರೇಲಿಯಾ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಕಳೆದ ಬಾರಿ ಅಕ್ಟೋಬರ್ನಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಮುಂದೂಡಲಾಗಿತ್ತು.
Published On - 5:24 pm, Sun, 31 January 21