ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಇಂದು ಅತ್ಯಂತ ಸಂಭ್ರಮದ ದಿನ. ಐತಿಹಾಸಿಕ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಭಾರತ ಆಸೀಸ್ ನೆಲದಲ್ಲೇ ನಿಂತು ಸಂಚಲನ ಮೂಡಿಸಿದೆ. ಅನುಭವಿ ಆಟಗಾರರ ಕೊರತೆಯ ನಡುವೆಯೂ, ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿರುವ ‘ಗಾಬಾ’ ಮೈದಾನದಲ್ಲಿ ಬರೋಬ್ಬರಿ 32 ವರ್ಷಗಳ ನಂತರ ಕಾಂಗರೂ ಪಡೆಗೆ ಸೋಲಿನ ರುಚಿ ತೋರಿಸಿರುವ ಭಾರತೀಯ ಪಡೆ ಎಲ್ಲರ ಹೃದಯ ಗೆದ್ದಿದೆ.
ಈ ಸಂಭ್ರಮದ ಕ್ಷಣದಲ್ಲಿ ಭಾರತೀಯ ತಂಡ ರೋಚಕ ಗೆಲುವು ದಾಖಲಿಸಿರುವ ಮತ್ತು ಮೂರು ದಶಕಗಳ ನಂತರ ಆಸೀಸ್ ಆಟಗಾರರ ಸೋಲಿಗೆ ಸಾಕ್ಷಿಯಾಗಿರುವ ಗಾಬಾ ಮೈದಾನದ ಕಿರು ಪರಿಚಯ ನಿಮಗಾಗಿ..
ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ಪ್ರಾಂತ್ಯದ ಬ್ರಿಸ್ಬೇನ್ನಲ್ಲಿರುವ ಗಾಬಾ ಕ್ರೀಡಾಂಗಣ ಅತ್ಯಂತ ಪ್ರಮುಖ ಮೈದಾನವೆಂದು ಗುರುತಿಸಿಕೊಂಡಿದೆ. ಗಾಬಾ ಎಂಬ ಹೆಸರು ವೂಲೂನ್ಗಾಬಾ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಇದು 1895ರಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡಿದೆ.
ಅಥ್ಲೆಟಿಕ್ಸ್, ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್, ಬೇಸ್ಬಾಲ್, ಸೈಕ್ಲಿಂಗ್, ರಗ್ಬಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಸಾಕ್ಷಿಯಾಗಿರುವ ಈ ಮೈದಾನ ಪ್ರಸ್ತುತ ಅಲ್ಲಿನ ಕ್ವೀನ್ಸ್ಲ್ಯಾಂಡ್ ಬುಲ್ಸ್ ಕ್ರಿಕೆಟ್ ತಂಡಕ್ಕೆ ತವರು ನೆಲವೆನಿಸಿಕೊಂಡಿದೆ.
1993ರಿಂದ 2005ರ ಅವಧಿಯಲ್ಲಿ ಪುನರ್ ಅಭಿವೃದ್ಧಿಗೆ ಸಾಕ್ಷಿಯಾಗಿರುವ ಈ ಕ್ರೀಡಾಂಗಣ ಪೂರ್ವದಿಂದ ಪಶ್ಚಿಮಕ್ಕೆ 170.6 ಮೀಟರ್ ಹಾಗೂ ಉತ್ತರದಿಂದ ದಕ್ಷಿಣಕ್ಕೆ 149.9 ಮೀಟರ್ ವಿಸ್ತೀರ್ಣ ಹೊಂದಿದೆ. ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್ ವೀಕ್ಷಕರಿಗಾಗಿ ಬೃಹತ್ ಆಸನ ವ್ಯವಸ್ಥೆ ಹೊಂದಿದ್ದ ಗಾಬಾದಲ್ಲಿ ಈ ಮೊದಲು 42,000 ಜನ ಏಕಕಾಲಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ಆದರೆ, 2010ರಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆದು, ನೂತನ ತಂತ್ರಜ್ಞಾನಗಳನ್ನು ಅಳವಡಿಸಿದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಿದ್ದಾಗ36 ಸಾವಿರ ಜನ ಕೂತು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಆಸ್ಟ್ರೇಲಿಯಾ ಫುಟ್ಬಾಲ್ ಲೀಗ್ ಇದ್ದಾಗ 37,478 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಬಹುದಾಗಿದೆ.
ಕ್ರಿಕೆಟ್ನಲ್ಲಿ ವೇಗದ ಬೌಲಿಂಗ್ ಮತ್ತು ಬೌನ್ಸಿಂಗ್ಗೆ ಸಹಕಾರಿಯಾಗಿರುವ ಗಾಬಾವನ್ನು ಮಾರ್ಚ್ನಿಂದ ಅಕ್ಟೋಬರ್ ತನಕ ಕ್ರಿಕೆಟ್ ಪಂದ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಈ ಮೈದಾನದಲ್ಲಿ ಆಸ್ಟ್ರೇಲಿಯಾ ಆಡಿರುವ 55 ಟೆಸ್ಟ್ ಮ್ಯಾಚ್ಗಳ ಪೈಕಿ 33ರಲ್ಲಿ ವಿಜೇತವಾಗಿದೆ. 13 ಪಂದ್ಯ ಡ್ರಾ ಮತ್ತು 1 ಪಂದ್ಯ ಟೈ ಆಗಿದ್ದು, 9 ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಪೈಕಿ ಇಂದು ಭಾರತ ನೀಡಿರುವ ಸೋಲಿನ ಆಘಾತ ಕಾಂಗರೂಗಳಿಗೆ 32 ವರ್ಷಗಳ ಬಳಿಕ ನೀಡಿದ್ದಾಗಿದೆ.
ಕುತೂಹಲಕಾರಿ ವಿವರಗಳಿಗಾಗಿ: https://en.wikipedia.org/wiki/The_Gabba#Cricket
ಟೇಸ್ಟಿ ಟೆಸ್ಟ್ | ಕ್ರಿಕೆಟ್ನ ನಿಜವಾದ ಗಮ್ಮತ್ತು ಇರುವುದೇ ಟೆಸ್ಟ್ನಲ್ಲಿ ಎಂದು ಮತ್ತೊಮ್ಮೆ ಸಾಬೀತಾಯ್ತು
Published On - 8:08 pm, Tue, 19 January 21