ಪಾಕ್​ನ ಬ್ರಾಡ್ ಪೀಕ್‌ನಲ್ಲಿ ಹಿಮಪಾತ: ಓಮನ್‌ನ ಪ್ರಸಿದ್ಧ ಪರ್ವತಾರೋಹಿ ನಾಧಿರಾ ಸೇರಿ ಇಬ್ಬರು ಸಾವು, ನಿರ್ಮಲ್ ಪುರ್ಜಾ ನಾಪತ್ತೆ

ಪಾಕಿಸ್ತಾನದ ಬ್ರಾಡ್ ಪೀಕ್‌ನಲ್ಲಿ ಭೀಕರ ಹಿಮಪಾತ ಸಂಭವಿಸಿದ್ದು, ಓಮನ್‌ನ ನಾಧಿರಾ ಸೇರಿ ಇಬ್ಬರು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ಜಗತ್ಪ್ರಸಿದ್ಧ ನಿರ್ಮಲ್ ಪುರ್ಜಾ ನೇತೃತ್ವದ 10 ಸದಸ್ಯರ ತಂಡ ನಾಪತ್ತೆಯಾಗಿದೆ. ಕಠಿಣ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದ್ದರೂ, ನಿರ್ಮಲ್ ಪುರ್ಜಾ ಅವರ GPS ಟ್ರ್ಯಾಕಿಂಗ್‌ನಿಂದ ಸಣ್ಣ ಚಲನೆ ದಾಖಲಾಗಿರುವುದು ಆಶಾಕಿರಣ ಮೂಡಿಸಿದೆ. ಜಾಗತಿಕ ಪರ್ವತಾರೋಹಣ ಸಮುದಾಯ ಆತಂಕದಲ್ಲಿದೆ.

ಪಾಕ್​ನ ಬ್ರಾಡ್ ಪೀಕ್‌ನಲ್ಲಿ ಹಿಮಪಾತ: ಓಮನ್‌ನ ಪ್ರಸಿದ್ಧ ಪರ್ವತಾರೋಹಿ ನಾಧಿರಾ ಸೇರಿ ಇಬ್ಬರು ಸಾವು, ನಿರ್ಮಲ್ ಪುರ್ಜಾ ನಾಪತ್ತೆ
ನಿರ್ಮಲ್

Updated on: Jul 31, 2026 | 12:57 PM

ಇಸ್ಲಾಮಾಬಾದ್, ಜುಲೈ 31: ಪಾಕಿಸ್ತಾನ(Pakistan)ದ ಕಾರಕೋರಂ ಪರ್ವತ ಶ್ರೇಣಿಯಲ್ಲಿರುವ ವಿಶ್ವದ 12 ನೇ ಅತಿ ಎತ್ತರದ ಶಿಖರ ‘ಬ್ರಾಡ್ ಪೀಕ್’ ಏರುವ ವೇಳೆ ಭೀಕರ ಹಿಮಪಾತ ಸಂಭವಿಸಿದ್ದು, ಕನಿಷ್ಠ ಇಬ್ಬರು ಪರ್ವತಾರೋಹಿಗಳು ಶವವಾಗಿ ಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಜಗತ್ಪ್ರಸಿದ್ಧ ನೇಪಾಳಿ ಪರ್ವತಾರೋಹಿ ನಿರ್ಮಲ್ ‘ನಿಮ್ಸ್‌ದೈ’ ಪುರ್ಜಾ ನೇತೃತ್ವದ 10 ಪರ್ವತಾರೋಹಿಗಳ ತಂಡವು ಕಾಣೆಯಾಗಿದ್ದು, ಜಾಗತಿಕ ಪರ್ವತಾರೋಹಣ ಸಮುದಾಯ ತೀವ್ರ ಆತಂಕದಲ್ಲಿದೆ.

ಪಾಕಿಸ್ತಾನ ಆಲ್ಪೈನ್ ಕ್ಲಬ್ ಗುರುವಾರ ಮಧ್ಯಾಹ್ನ ಸಂಭವಿಸಿದ ಈ ಅನಾಹುತವನ್ನು ದೃಢಪಡಿಸಿದ್ದು, ಮೃತಪಟ್ಟ ಇಬ್ಬರು ಪ್ರಮುಖ ಪರ್ವತಾರೋಹಿಗಳನ್ನು ಗುರುತಿಸಿದೆ. ಓಮನ್ ಸುಲ್ತಾನೇಟ್‌ನ ಪ್ರಸಿದ್ಧ ಪರ್ವತಾರೋಹಿ ನಾಧಿರಾ ಅವರು ಹಿಮಪಾತಕ್ಕೆ ಸಿಲುಕಿ ಉಸಿರೆಳೆದಿದ್ದಾರೆ. ಅವರ ಮೃತದೇಹವನ್ನು ಪತ್ತೆಹಚ್ಚಲಾಗಿದ್ದು, ಹೆಲಿಕಾಪ್ಟರ್ ಮೂಲಕ ಸ್ಕಾರ್ದು ನಗರಕ್ಕೆ ರವಾನಿಸಲಾಗುತ್ತಿದೆ. ನೇಪಾಳ ಮೂಲದ ಮತ್ತೊಬ್ಬ ಅನುಭವಿ ಪರ್ವತಾರೋಹಿ ಯುಕ್ತ ಅವರೂ ಸಹ ಈ ದುರಂತದಲ್ಲಿ ಮೃತಪಟ್ಟಿದ್ದು, ಅವರ ದೇಹದ ಸ್ಥಳಾಂತರ ಕಾರ್ಯ ನಡೆಯುತ್ತಿದೆ.

ನಿರ್ಮಲ್ ಪುರ್ಜಾ ನೇತೃತ್ವದ ತಂಡವು ಕ್ಯಾಂಪ್ 2 ಮತ್ತು ಕ್ಯಾಂಪ್ 3 ರ ನಡುವೆ ಶಿಖರವೇರುತ್ತಿದ್ದಾಗ ಇದ್ದಕ್ಕಿದ್ದಂತೆ ಹಿಮಪಾತ ಸಂಭವಿಸಿದೆ. ಹಿಮಪಾತದ ನಂತರ ತಂಡದೊಂದಿಗಿನ ಸಂಪೂರ್ಣ ವೈರ್‌ಲೆಸ್ ಹಾಗೂ ಉಪಗ್ರಹ ಸಂಪರ್ಕ ಕಡಿದುಹೋಗಿದೆ. ಘಟನಾ ಸ್ಥಳದಲ್ಲಿ ಭಾರಿ ಹಿಮಪಾತ ಮತ್ತು ದಟ್ಟ ಮಂಜು ಕವಿದಿರುವುದರಿಂದ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ.

ಮತ್ತಷ್ಟು ಓದಿ: ಪಾಕಿಸ್ತಾನ ಸೇನೆಯಿಂದ ಬಲೂಚಿಸ್ತಾನದ ಬಾಲಕಿಯ ಹತ್ಯೆ; ಹಮಾಸ್ ರೀತಿ ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಮೆರವಣಿಗೆ

ಬ್ರಿಟಿಷ್ ಸೇನೆಯ ಗಣ್ಯ ‘ಗೂರ್ಖಾ ರೆಜಿಮೆಂಟ್’ ಹಾಗೂ ಯುಕೆ ವಿಶೇಷ ಪಡೆಗಳಲ್ಲಿ (SBS) 16 ವರ್ಷ ಸೇವೆ ಸಲ್ಲಿಸಿದ್ದ ನಿರ್ಮಲ್ ಪುರ್ಜಾ, ವಿಶ್ವದ ಅತ್ಯಂತ ಎತ್ತರದ 14 ಶಿಖರಗಳನ್ನು ಅತಿ ಕನಿಷ್ಠ ಅವಧಿಯಲ್ಲಿ ಏರಿ ಗಿನ್ನೆಸ್ ದಾಖಲೆ ಬರೆದ ಜಾಗತಿಕ ಸಾಹಸಿ. ಹಿಮಪಾತದ ವರದಿಯ ನಂತರವೂ ನಿರ್ಮಲ್ ಪುರ್ಜಾ ಅವರ ಜಿಪಿಎಸ್ (GPS) ಟ್ರ್ಯಾಕಿಂಗ್ ಸಾಧನದಿಂದ ಸಣ್ಣ ಪ್ರಮಾಣದ ಚಲನೆ ದಾಖಲಾಗಿರುವುದು ರಕ್ಷಣಾ ಸಿಬ್ಬಂದಿಗೆ ಭರವಸೆಯ ಕಿರಣ ಮೂಡಿಸಿದೆ.

‘‘ಅವರೊಬ್ಬ ಹೋರಾಟಗಾರ, ಈ ಕಠಿಣ ಪರಿಸ್ಥಿತಿಯಿಂದ ಅವರು ಜೀವಂತವಾಗಿ ಹೊರಬರಲಿದ್ದಾರೆ ಎಂಬ ನಂಬಿಕೆಯಿದೆ” ಎಂದು ಅವರ ಆಪ್ತರು ಪ್ರಾರ್ಥಿಸುತ್ತಿದ್ದಾರೆ. ವಿಶ್ವದ ಎರಡನೇ ಅತಿ ಎತ್ತರದ ಶಿಖರವಾದ ‘ಕೆ2’ (K2) ಪರ್ವತದಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿರುವ ಬ್ರಾಡ್ ಪೀಕ್, ಅತ್ಯಂತ ಕಡಿದಾದ ಮಂಜಿನ ಕಂದಕಗಳು ಹಾಗೂ ದಿಢೀರ್ ಹಿಮಪಾತಗಳಿಗೆ ಹೆಸರಾಗಿದೆ.

ಸಾಹಸ ಯಾನದ ಗುರಿ: ನಿರ್ಮಲ್ ಪುರ್ಜಾ ಅವರು ವಿಶ್ವದ 8 ಸಾವಿರ ಮೀಟರ್‌ಗಿಂತ ಎತ್ತರದ ಎಲ್ಲಾ ಶಿಖರಗಳನ್ನು ಮೂರು ಬಾರಿ ಏರಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಳ್ಳುವ ಐತಿಹಾಸಿಕ ಸಾಧನೆಯ ಹಾದಿಯಲ್ಲಿದ್ದರು. ಈ ದಂಡಯಾತ್ರೆಯ ನಡುವೆಯೇ ಈ ದುರಂತ ಸಂಭವಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us