
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಮತ್ತೆ ಆತಂಕ ಮೂಡಿಸುತ್ತಿವೆ. ಜನವರಿ 23ರ ಶುಕ್ರವಾರ ತಡರಾತ್ರಿ, ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ಯುವಕ ಚಂಚಲ್ ಭೌಮಿಕ್ ಅವರನ್ನು ಗ್ಯಾರೇಜ್‌ನೊಳಗೆ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ವರದಿಯಾಗಿದೆ.
ಸ್ಥಳೀಯರ ಮಾಹಿತಿಯಂತೆ, ನರಸಿಂಗ್ಡಿ ಪೊಲೀಸ್ ಲೈನ್ಸ್ ಸಮೀಪದ ಮಸೀದಿ ಪ್ರದೇಶದಲ್ಲಿರುವ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂಚಲ್ ಭೌಮಿಕ್, ಎಂದಿನಂತೆ ಕೆಲಸ ಮುಗಿಸಿ ಗ್ಯಾರೇಜ್ ಒಳಗೇ ಮಲಗಿದ್ದ. ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಗ್ಯಾರೇಜ್‌ನ ಶಟರ್ ಅನ್ನು ಹೊರಗಿನಿಂದ ಮುಚ್ಚಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಕೃತ್ಯ ಪೂರ್ವನಿಯೋಜಿತವಾಗಿ ನಡೆದಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಗ್ಯಾರೇಜ್ ಒಳಗೆ ಸಿಲುಕಿದ್ದ ಭೌಮಿಕ್ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು, ಘಟನೆ ನಡೆಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುಮಾರು ಒಂದು ಗಂಟೆಯ ಪ್ರಯತ್ನದ ಬಳಿಕ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಭೌಮಿಕ್ ಅವರ ಸುಟ್ಟ ದೇಹವನ್ನು ಗ್ಯಾರೇಜ್ ಒಳಗಿನಿಂದ ಹೊರತೆಗೆದುಕೊಳ್ಳಲಾಗಿದೆ.
ಚಂಚಲ್ ಭೌಮಿಕ್ ಅವರು ಕೊಮಿಲ್ಲಾ ಜಿಲ್ಲೆಯ ಲಕ್ಷ್ಮಿಪುರ ಗ್ರಾಮದ ನಿವಾಸಿಗಳು. ಅವರು ದಿವಂಗತ ಖೋಕನ್ ಚಂದ್ರ ಭೌಮಿಕ್ ಮತ್ತು ಪ್ರಮಿತಾ ರಾಣಿ ಭೌಮಿಕ್ ಅವರ ಪುತ್ರ. ತಂದೆಯ ನಿಧನದ ನಂತರ ಕುಟುಂಬದ ಏಕೈಕ ಆಧಾರವಾಗಿದ್ದ ಚಂಚಲ್, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ, ಅಂಗವಿಕಲ ಅಣ್ಣ ಹಾಗೂ ಕಿರಿಯ ಸಹೋದರರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಕಳೆದ ಆರು ವರ್ಷಗಳಿಂದ ಅವರು ರುಬೆಲ್ ಮಿಯಾ ಅವರ ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು.
ಇದನ್ನೂ ಓದಿ: ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ, ಇರಾನ್ಗೆ ಹೊಸ ಎಚ್ಚರಿಕೆ ಕೊಟ್ಟ ಡೊನಾಲ್ಡ್ ಟ್ರಂಪ್
ಚಂಚಲ್ ಭೌಮಿಕ್ ಅವರಿಗೆ ಯಾರೊಂದಿಗೂ ವೈಯಕ್ತಿಕ ದ್ವೇಷ ಅಥವಾ ವಿವಾದಗಳಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಹಾಗೂ ಗ್ಯಾರೇಜ್ ಮಾಲೀಕರು ಹೇಳಿದ್ದಾರೆ. ಆತ ಶಾಂತ ಸ್ವಭಾವದ, ಪ್ರಾಮಾಣಿಕ ಮತ್ತು ಶ್ರಮಶೀಲ ಯುವಕ ಎಂಬುದನ್ನು ಸ್ಥಳೀಯರು ದೃಢಪಡಿಸಿದ್ದಾರೆ. ಇದರಿಂದಾಗಿ ಈ ಕೊಲೆಯ ಹಿಂದೆ ಯಾವುದೇ ವೈಯಕ್ತಿಕ ಕಾರಣವಿಲ್ಲ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದಿರುವ ಹಿಂಸಾಚಾರದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಧಾರ್ಮಿಕ ದ್ವೇಷವೇ ಈ ಕೃತ್ಯದ ಹಿಂದೆ ಇರಬಹುದೆಂಬ ಶಂಕೆಯನ್ನು ಕೆಲ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಪ್ರಕರಣದ ನಿಖರ ಉದ್ದೇಶ ಮತ್ತು ಆರೋಪಿಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:01 am, Sun, 25 January 26