ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಬಿಎನ್‌ಪಿ ಅಭ್ಯರ್ಥಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಆಯ್ಕೆ

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (BNP) ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಿರಿಯ ರಾಜಕಾರಣಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಬಾಂಗ್ಲಾದೇಶದ 23ನೇ ಅಧ್ಯಕ್ಷರಾಗಿ ಪಾರ್ಲಿಮೆಂಟ್‌ನಲ್ಲಿ ನಡೆದ ಮತದಾನದ ಮೂಲಕ ಆಯ್ಕೆಯಾಗಿದ್ದಾರೆ. ಕಳೆದ 35 ವರ್ಷಗಳ ಇತಿಹಾಸದಲ್ಲೇ ಬಾಂಗ್ಲಾದೇಶದಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದು, ಸಂಸತ್ ಸದಸ್ಯರು ಮತದಾನ ನಡೆಸಿದ ಮೊದಲ ಸ್ಪರ್ಧಾತ್ಮಕ ಚುನಾವಣೆ ಇದಾಗಿದೆ.

ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಬಿಎನ್‌ಪಿ ಅಭ್ಯರ್ಥಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಆಯ್ಕೆ
Mirza Fakhrul Islam Alamgir
Image Credit source: TV9

Updated on: Aug 20, 2026 | 9:28 PM

ಢಾಕಾ, ಆಗಸ್ಟ್ 20: ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (BNP) ಹಿರಿಯ ನಾಯಕ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ (Mirza Fakhrul Islam Alamgir) ಬಾಂಗ್ಲಾದೇಶದ 23ನೇ ಅಧ್ಯಕ್ಷರಾಗಿ ಇಂದು ಆಯ್ಕೆಯಾಗಿದ್ದಾರೆ. ಬಾಂಗ್ಲಾದೇಶದ (Bangladesh) ಪಾರ್ಲಿಮೆಂಟ್​​ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಲಂಗೀರ್ ಅವರು 255 ಮತಗಳನ್ನು ಪಡೆಯುವ ಮೂಲಕ, 88 ಮತಗಳನ್ನು ಪಡೆದ ಒಲಿ ಅಹ್ಮದ್ ಅವರನ್ನು ಸೋಲಿಸಿದರು. ಕಳೆದ 35 ವರ್ಷಗಳ ಇತಿಹಾಸದಲ್ಲೇ ಬಾಂಗ್ಲಾದೇಶದಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಅಧ್ಯಕ್ಷೀಯ ಕಣದಲ್ಲಿದ್ದ ಮೊದಲ ಸ್ಪರ್ಧಾತ್ಮಕ ಚುನಾವಣೆ ಇದಾಗಿದೆ. ಈ ಹಿಂದೆ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ದೂರ ಉಳಿಯುತ್ತಿದ್ದರಿಂದ, ಅವಿರೋಧವಾಗಿ ಅಭ್ಯರ್ಥಿಯ ಆಯ್ಕೆ ನಡೆಯುತ್ತಿತ್ತು.

ಬಾಂಗ್ಲಾದೇಶದ ಪಾರ್ಲಿಮೆಂಟ್​​ನಲ್ಲಿ ನಡೆದ ಮತದಾನದಲ್ಲಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಒಟ್ಟು 255 ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದರು. ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ಹಾಗೂ ನ್ಯಾಷನಲ್ ಸಿಟಿಜನ್ ಪಾರ್ಟಿ (NCP) ನೇತೃತ್ವದ 11 ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ನಿವೃತ್ತ ಕರ್ನಲ್ ಓಲಿ ಅಹ್ಮದ್ 88 ಮತಗಳನ್ನು ಪಡೆದರು. ಒಟ್ಟು 349 ಅರ್ಹ ಸಂಸದರ ಪೈಕಿ 343 ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಎಎಸ್‌ಎಂ ನಾಸಿರ್ ಉದ್ದೀನ್ ಅವರ ಉಸ್ತುವಾರಿಯಲ್ಲಿ ಮತದಾನ ನಡೆದು ಫಲಿತಾಂಶ ಪ್ರಕಟಿಸಲಾಯಿತು.


ಇದನ್ನೂ ಓದಿ: ‘ನನ್ನನ್ನು ಕೊಲ್ಲಬಹುದು, ಜೈಲಿಗೆ ಹಾಕಬಹುದು, ಆದರೂ ಬಾಂಗ್ಲಾದೇಶಕ್ಕೆ ಹೋಗುತ್ತೇನೆ’; ಶೇಖ್ ಹಸೀನಾ ಶಪಥ

ಚುನಾವಣೆಗೆ ಕಾರಣವೇನು?:

ಬಾಂಗ್ಲಾದೇಶದ 22ನೇ ಅಧ್ಯಕ್ಷರಾಗಿದ್ದ ಮೊಹಮ್ಮದ್ ಶಹಾಬುದ್ದೀನ್ ಆರೋಗ್ಯ ಸಮಸ್ಯೆಯಿಂದಾಗಿ ತಮ್ಮ 5 ವರ್ಷಗಳ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ರಾಜೀನಾಮೆ ನೀಡಿದ್ದರು. ಸಂವಿಧಾನದ ನಿಯಮಾವಳಿಗಳ ಪ್ರಕಾರ ಹುದ್ದೆ ಖಾಲಿಯಾದ 90 ದಿನಗಳ ಒಳಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯಬೇಕಾದ ಕಾರಣದಿಂದ ಸಂಸತ್ತಿನಲ್ಲಿ ಈ ಚುನಾವಣೆ ನಡೆಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us