
ನ್ಯೂಯಾರ್ಕ್, ನವೆಂಬರ್ 12: ಅಮೆರಿಕದ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ನ ಫ್ಲಾಟ್ಬುಷ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಭಾರೀ ದುರಂತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ.
ಬುಧವಾರ ಸಂಜೆ ಸುಮಾರು 4 ಗಂಟೆಗೆ ಕಟ್ಟಡ ಕುಸಿದ ಮಾಹಿತಿ ಲಭಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ಸಿಬ್ಬಂದಿ ಕೈಗಳಿಂದಲೇ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ. ವಿದ್ಯುತ್ ಗರಗಸಗಳು, ಡ್ರೋನ್ಗಳು ಮತ್ತು ಶ್ವಾನದಳದ ನೆರವಿನಿಂದಲೂ ಹುಡುಕಾಟ ನಡೆಸಲಾಗುತ್ತಿದೆ.
10 ಮಂದಿಗೆ ಗಾಯ, ಬದುಕುಳಿದವರಿಗಾಗಿ ಹುಡುಕಾಟ
ಅಧಿಕಾರಿಗಳ ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡ 10 ಮಂದಿಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಜೆ ಸುಮಾರು 6.30ರ ವೇಳೆಗೆ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಬಳಿಕ ಅವರನ್ನು ಸ್ಟ್ರೆಚರ್ ಮೂಲಕ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಾತ್ರಿ ಕತ್ತಲಾಗುತ್ತಿದ್ದರೂ ರಕ್ಷಣಾ ಕಾರ್ಯಾಚರಣೆ ನಿಲ್ಲಿಸದೆ, ಟಾರ್ಚ್ಗಳ ಬೆಳಕಿನಲ್ಲಿ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ.
ಇದನ್ನೂ ಓದಿ:
ಕಟ್ಟಡ ಕಾಮಗಾರಿ ವೇಳೆ ದುರಂತ: ಮೂವರು ಕಾರ್ಮಿಕರು ದಾರುಣ ಸಾವು, ನಾಲ್ವರ ಸ್ಥಿತಿ ಗಂಭೀರ
ಕಟ್ಟಡ ಕುಸಿಯಲು ಕಾರಣವೇನು?
ಕುಸಿದ ಕಟ್ಟಡವು ಮೂರು ಅಂತಸ್ತಿನ ವಸತಿ ಮತ್ತು ವಾಣಿಜ್ಯ ಕಟ್ಟಡವಾಗಿತ್ತು. ಕೆಳಮಹಡಿಯಲ್ಲಿ ಅಂಗಡಿ ಇದ್ದು, ಮೇಲಿನ ಮಹಡಿಗಳಲ್ಲಿ ವಸತಿ ಮನೆಗಳಿದ್ದವು. ಪಕ್ಕದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಉತ್ಖನನ ಕಾರ್ಯ ನಡೆಯುತ್ತಿತ್ತು. ಈ ವೇಳೆ ಮೂರು ಅಂತಸ್ತಿನ ಕಟ್ಟಡವು ಪಕ್ಕದ ನಿರ್ಮಾಣ ಸ್ಥಳದ ಗುಂಡಿಗೆ ಕುಸಿದು ಬಿದ್ದಿದೆ. ಕುಸಿದ ಕಟ್ಟಡದ ಪಕ್ಕದಲ್ಲಿದ್ದ ಮತ್ತೊಂದು ಕಟ್ಟಡದ ಗೋಡೆಯೂ ಹಾನಿಗೊಳಗಾಗಿದೆ. ಅದರ ಗೋಡೆಯ ಒಂದು ಭಾಗ ಕಳಚಿ ಬಿದ್ದಿದ್ದರಿಂದ ಒಳಗಿನ ಕೊಠಡಿಗಳು, ಮಲಗುವ ಕೋಣೆ ಹಾಗೂ ಬಟ್ಟೆಗಳಿಂದ ತುಂಬಿದ್ದ ಕಪಾಟುಗಳು ಹೊರಗೆ ಕಾಣಿಸುತ್ತಿದ್ದವು.
ಆದರೆ ಉತ್ಖನನವೇ ಕಟ್ಟಡ ಕುಸಿಯಲು ಕಾರಣವೇ ಎಂಬುದು ಇನ್ನೂ ಖಚಿತವಾಗಿಲ್ಲ. ನ್ಯೂಯಾರ್ಕ್ ನಗರದ ಕಟ್ಟಡಗಳ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಮೂರು ಅಂತಸ್ತಿನ ಕಟ್ಟಡಕ್ಕೆ ಅನುಮತಿ ದೊರೆತಿತ್ತು; ಒಂಬತ್ತು ಅಂತಸ್ತಿನ ಕಟ್ಟಡದ ಪ್ರಸ್ತಾವನೆಗೆ ಇನ್ನೂ ಅನುಮೋದನೆ ಸಿಕ್ಕಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಯರ್, ಗವರ್ನರ್ ಸಂತಾಪ
ಘಟನೆ ಕುರಿತು ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಕ್ಷಣಾ ತಂಡಗಳು ಸಂತ್ರಸ್ತರಿಗೆ ನೆರವಾಗುತ್ತಿದ್ದು, ಜನರು ಅಪಘಾತದ ಸ್ಥಳದಿಂದ ದೂರವಿರಬೇಕು ಎಂದು ಮನವಿ ಮಾಡಿದ್ದಾರೆ. ಫ್ಲಾಟ್ಬುಷ್ ಮತ್ತು ಬೆಡ್ಫೋರ್ಡ್ ಅವೆನ್ಯೂ ಸುತ್ತಮುತ್ತ ರಸ್ತೆಗಳನ್ನು ಮುಚ್ಚಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಕೂಡ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ತನಿಖೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ