
ಲಂಡನ್, ಜೂನ್ 4: ವಿಶ್ವದ ಅತ್ಯಂತ ಶಕ್ತಿಶಾಲಿ ಗುಪ್ತಚರ ಮಾಹಿತಿ ಹಂಚಿಕೆ ಒಕ್ಕೂಟವಾದ ‘ಫೈವ್ ಐಸ್’ (ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಬ್ರಿಟನ್ ಮತ್ತು ಅಮೆರಿಕ) ದೇಶಗಳ ಸರ್ಕಾರಿ ಮತ್ತು ಮಿಲಿಟರಿ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಚೀನಾ (China) ಆನ್‌ಲೈನ್‌ನಲ್ಲಿ ನಕಲಿ ಉದ್ಯೋಗದ ಜಾಲ ಬೀಸಿದೆ ಎಂದು ಒಕ್ಕೂಟವು ಗಂಭೀರ ಎಚ್ಚರಿಕೆ ನೀಡಿದೆ. ಲಿಂಕ್ಡ್‌ಇನ್ (LinkedIn), ಇಂಡೀಡ್ನಂತಹ ವೃತ್ತಿಪರ ಜಾಲತಾಣಗಳ ಮೂಲಕ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ಪಡೆಯಲು ಚೀನಾ ಈ ಕುತಂತ್ರ ನಡೆಸುತ್ತಿದೆ ಎನ್ನಲಾಗಿದೆ.
ಚೀನಾದ ಮಿಲಿಟರಿ ಗುಪ್ತಚರ ಇಲಾಖೆಯ ಏಜೆಂಟ್‌ಗಳು ಖಾಸಗಿ ಉದ್ಯಮಗಳು ಅಥವಾ ಥಿಂಕ್ ಟ್ಯಾಂಕ್‌ಗಳ ಮಾನವ ಸಂಪನ್ಮೂಲ (HR) ಸಲಹೆಗಾರರಂತೆ ನಟಿಸುತ್ತಾರೆ. ಲಿಂಕ್ಡ್‌ಇನ್ (LinkedIn), ಇಂಡೀಡ್ (Indeed) ಮತ್ತು ಅಪ್‌ವರ್ಕ್ (Upwork)ನಂತಹ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ವಿದೇಶಾಂಗ ನೀತಿ ವಿಶ್ಲೇಷಕರು ಅಥವಾ ರಕ್ಷಣಾ ವಿಶ್ಲೇಷಕರ ಹುದ್ದೆಗಳಿಗಾಗಿ ನಕಲಿ ಜಾಹೀರಾತುಗಳನ್ನು ಪೋಸ್ಟ್ ಮಾಡುತ್ತಾರೆ.
ಇದನ್ನೂ ಓದಿ: ಚೀನಾದಿಂದ ತಪ್ಪಿಸಿಕೊಂಡು ಸಮುದ್ರದಲ್ಲಿ ರಬ್ಬರ್ ದೋಣಿಯಲ್ಲಿ 30 ಗಂಟೆಗಳ ಕಾಲ ಪ್ರಯಾಣಿಸಿ ದಕ್ಷಿಣ ಕೊರಿಯಾ ತಲುಪಿದ ಮಾಜಿ ಪೊಲೀಸ್
ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಆನ್‌ಲೈನ್ ಸಂದರ್ಶನದ ಮೂಲಕ ಸಂಪರ್ಕಿಸಿ, ನಂತರ ಸಾರ್ವಜನಿಕವಾಗಿ ಲಭ್ಯವಿಲ್ಲದ ರಹಸ್ಯ ಮತ್ತು ಆಂತರಿಕ ಮಾಹಿತಿಗಳನ್ನು ಒದಗಿಸುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಚೀನಾದ ಈ ನೇಮಕಾತಿ ತಂತ್ರಕ್ಕೆ ಉನ್ನತ ಮಟ್ಟದ ಭದ್ರತಾ ಅನುಮತಿ ಹೊಂದಿರುವ ಸರ್ಕಾರಿ ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ, ಸರ್ಕಾರದ ಮಾಹಿತಿಗಳಿಗೆ ಪರೋಕ್ಷ ಸಂಪರ್ಕ ಹೊಂದಿರುವ ಪತ್ರಕರ್ತರು ಮತ್ತು ಥಿಂಕ್ ಟ್ಯಾಂಕ್ ಉದ್ಯೋಗಿಗಳೇ ಮುಖ್ಯ ಟಾರ್ಗೆಟ್ ಎನ್ನಲಾಗಿದೆ.
ಚೀನಾದ ಏಜೆಂಟ್‌ಗಳು ಅಭ್ಯರ್ಥಿಗಳ ಬಯೋಡೇಟಾವನ್ನು ಪರಿಶೀಲಿಸಿ ಸೂಕ್ಷ್ಮ ಮಾಹಿತಿ ಹೊಂದಿರುವವರನ್ನು ಗುರುತಿಸುತ್ತಾರೆ. ಬಳಿಕ ಚೀನಾದ ವಿದೇಶಾಂಗ ಸಂಬಂಧಗಳು, ರಕ್ಷಣೆ ಅಥವಾ ವ್ಯಾಪಾರದ ಕುರಿತು ವರದಿ ಬರೆಯಲು ಸೂಚಿಸುತ್ತಾರೆ. ನಂತರ ದೇಶದ ರಹಸ್ಯ ಮಾಹಿತಿಗಳನ್ನು ಕೇಳಲು ಆರಂಭಿಸುತ್ತಾರೆ. ಈ ಪ್ರತಿಯೊಂದು ವರದಿಗೂ ಅಭ್ಯರ್ಥಿಗಳಿಗೆ ಪೇಪಾಲ್ ವೆಸ್ಟರ್ನ್ ಯೂನಿಯನ್ ಅಥವಾ ಕ್ರಿಪ್ಟೋಕರೆನ್ಸಿ ಮೂಲಕ ನೂರಾರು ಅಥವಾ ಸಾವಿರಾರು ಡಾಲರ್ ಹಣವನ್ನು ಪಾವತಿಸಲಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ; ಪಾಕಿಸ್ತಾನ-ಚೀನಾಗೆ ವಿದೇಶಾಂಗ ಸಚಿವಾಲಯ ಚಾಟಿ
ಈ ಬಗ್ಗೆ ಮಾತನಾಡಿದ ಬ್ರಿಟನ್‌ನ ಭದ್ರತಾ ಸಚಿವ ಡಾನ್ ಜಾರ್ವಿಸ್, “ಚೀನಾದ ಗುಪ್ತಚರ ಸಂಸ್ಥೆಗಳ ಗುರಿಯಾಗಬಹುದಾದ ಪ್ರತಿಯೊಬ್ಬರೂ ಇಂತಹ ಆನ್‌ಲೈನ್ ಆಮಿಷಗಳ ಬಗ್ಗೆ ತೀವ್ರ ಜಾಗರೂಕರಾಗಿರಬೇಕು. ನಮ್ಮ ದೇಶದ ಭದ್ರತೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು” ಎಂದು ವಿನಂತಿಸಿದ್ದಾರೆ. ಆದರೆ, ಚೀನಾ ಈ ಆರೋಪವನ್ನು ನಿರಾಕರಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ