ವಾಷಿಂಗ್ಟನ್: ಜಾಗತಿಕ ಟೆಕ್ ದಿಗ್ಗಜ ಕಂಪನಿಗಳಾದ ಫೇಸ್ಬುಕ್ ಮತ್ತು ಆ್ಯಪಲ್ ನಡುವಣ ಹಗ್ಗಜಗ್ಗಾಟ ಸದ್ಯಕ್ಕೆ ನಿಲ್ಲುವಂತಿಲ್ಲ. ಬಳಕೆದಾರರ ದತ್ತಾಂಶ ಉಪಯೋಗಿಸುವ ಕುರಿತು ಎರಡೂ ಕಂಪನಿಗಳು ಕೆಸರೆರೆಚಾಟದಲ್ಲಿ ನಿರತವಾಗಿವೆ. ಅಮೆರಿಕಾದ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಫೇಸ್ಬುಕ್, ‘ಆ್ಯಪಲ್ ಆಪರೇಟಿಂಗ್ ಸಿಸ್ಟಂನ ಹೊಸ ಅಪ್ಡೇಟ್ಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಹೊರೆಯಾಗಲಿದೆ’ ಎಂದು ವ್ಯಾಖ್ಯಾನಿಸಿದೆ.
ಆ್ಯಪಲ್ ಐಒಎಸ್-14 ಕಾರ್ಯಾಚರಣೆ ವ್ಯವಸ್ಥೆಗೆ (IOS-14 Operating System) ಹೊಸ ಅಪ್ಡೇಟ್ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಅಪ್ಡೇಟ್ನಲ್ಲಿ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದಾಗಿ ಆ್ಯಪಲ್ ಘೋಷಿಸಿದೆ. ಆ್ಯಪಲ್ನ ಈ ಕ್ರಮ ಇದೀಗ ಫೇಸ್ಬುಕ್ನ ಕೆಂಗಣ್ಣಿಗೆ ಗುರಿಯಾಗಿದೆ.
ಫೇಸ್ಬುಕ್ನ ವಾದವೇನು?
ಕಿರು ಉದ್ದಿಮೆದಾರರು ಮತ್ತು ಗ್ರಾಹಕರ ನಡುವಣ ಬೆಸುಗೆಗೆ ಆ್ಯಪಲ್ನ ಹೊಸ ನಿಯಮಗಳಿಂದ ತೊಂದರೆಯಾಗಲಿದೆ. ನಿರ್ದಿಷ್ಟ ಗುಂಪಿನ ಜನರಿಗೆ ತಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ತಲುಪಿಸಲು ವ್ಯಾಪಾರಿಗಳಿಗೆ ಕಷ್ಟವಾಗುತ್ತದೆ ಎಂದು ಫೇಸ್ಬುಕ್ ಅಭಿಪ್ರಾಯಪಟ್ಟಿದೆ. ತನ್ನ ಬಳಕೆದಾರರ ಮೇಲೆ ಆ್ಯಪಲ್ ಈ ನಿಯಮಗಳನ್ನು ಬಲವಂತವಾಗಿ ಜಾರಿಗೊಳಿಸುತ್ತಿದೆ. ಆ್ಯಪಲ್ನ ಈ ಕ್ರಮವು ಮುಕ್ತ ಅಂತರ್ಜಾಲ ಪರಿಕಲ್ಪನೆಯ ಆಶಯಗಳನ್ನು ಉಲ್ಲಂಘಿಸುತ್ತದೆ ಎಂದು ಫೇಸ್ಬುಕ್ ವಿಶ್ಲೇಷಿಸಿದೆ.
ಆ್ಯಪಲ್ನ ವಾದವೇನು?
ಐಒಎಸ್-14ಕ್ಕೆ ಬಿಡುಗಡೆ ಮಾಡುತ್ತಿರುವ ಅಪ್ಡೇಟ್ಗಳನ್ನು ಆ್ಯಪಲ್ ಸಮರ್ಥಿಸಿಕೊಂಡಿದೆ. ತಾವು ಬಳಸುತ್ತಿರುವ ಉಪಕರಣಗಳಿಂದ ಎಂಥ ದತ್ತಾಂಶಗಳನ್ನು ಯಾರೆಲ್ಲಾ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಬಳಕೆದಾರರಿಗೆ ಇರಬೇಕು. ತಮ್ಮ ದತ್ತಾಂಶಗಳು ಅಂತರ್ಜಾಲದಲ್ಲಿ ನಿರ್ದಿಷ್ಟ ಸಂಸ್ಥೆಗಳಿಗೆ ನೀಡುವ ಅಥವಾ ಬಿಡುವ ಆಯ್ಕೆ ಬಳಕೆದಾರರಿಗೆ ಇರಬೇಕು. ಆ್ಯಪ್ಸ್ಟೋರ್ಗೆ ಬರುವ ಆ್ಯಪ್ಗಳು ಇಂಥ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಬೇಕು ಎಂಬ ಸ್ಪಷ್ಟ ನಿಲುವನ್ನು ಆ್ಯಪಲ್ ತಳೆದಿದೆ.
ಇದನ್ನೂ ಓದಿ: ಬಜರಂಗ ದಳಕ್ಕೆ ನಿರ್ಬಂಧ ಹೇರುವ ಅಗತ್ಯವಿಲ್ಲ; ಸಂಸದೀಯ ಸಮಿತಿಗೆ ಫೇಸ್ಬುಕ್ ವಿವರಣೆ
ಕಾಳಜಿಯೋ? ಹುನ್ನಾರವೋ?
ಆ್ಯಪಲ್ ತನ್ನ ಆಪರೇಟಿಂಗ್ ಸಿಸ್ಟಂನಿಂದ ದತ್ತಾಂಶ ಸೋರಿಕೆಗೆ ತಡೆಯೊಡ್ಡುವ ಮಾತನಾಡಿದ ನಂತರ ಫೇಸ್ಬುಕ್ ಕಿರು ಉದ್ದಿಮೆಗಳ ಪರವಾಗಿ ಮಾತನಾಡಲು ಶುರು ಮಾಡಿದೆ. ಸಣ್ಣ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅವರ ಸಂಸ್ಥೆಗಳ ಜಾಹೀರಾತನ್ನು ನಿರ್ದಿಷ್ಟ ಗುಂಪಿಗೆ (ಟಾರ್ಗೆಟ್ ಆಡಿಯನ್ಸ್) ತಲುಪಿಸಲು ಆ್ಯಪಲ್ನ ನಿಯಮದಿಂದ ಅಡಚಣೆಯಾಗುತ್ತದೆ ಎಂದು ವಾದ ಮಾಡುತ್ತಿದೆ.
ಕೆಲ ಜಾಲತಾಣಗಳಲ್ಲಿ ಪ್ರಕಟವಾಗಿರುವ ತಜ್ಞರ ವಿಶ್ಲೇಷಣೆಗಳ ಪ್ರಕಾರ ಈ ನಿಲುವಿನ ಹಿಂದೆ ಫೇಸ್ಬುಕ್ನ ಸ್ವಯಂ ಹಿತಾಸಕ್ತಿಯೂ ಇದೆ. ಕಿರು ಉದ್ದಿಮೆಗಳ ಜಾಹೀರಾತು ಪ್ರಸಾರದಿಂದ (ಬೂಸ್ಟಿಂಗ್) ಫೇಸ್ಬುಕ್ಗೆ ಹಣ ಪಾವತಿಯಾಗುತ್ತದೆ. ಟಾರ್ಗೆಟ್ ಆಡಿಯನ್ಸ್ ಗುರುತಿಸಲು ಫೇಸ್ಬುಕ್ ಬಳಕೆದಾರರ ಮಾಹಿತಿಯನ್ನು ತನ್ನ ಸೂತ್ರಗಳ (ಆಲ್ಗರಿದಂ) ಮೂಲಕ ವಿಶ್ಲೇಷಿಸುತ್ತದೆ. ಆ್ಯಪಲ್ ಉಪಕರಣಗಳ ಬಳಕೆದಾರರಿಂದ ಎಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ವಿವರಗಳನ್ನು ಫೇಸ್ಬುಕ್ ಈವರೆಗೂ ಬಿಟ್ಟುಕೊಟ್ಟಿಲ್ಲ.
ಈಗಿನಂತೆಯೇ ಮುಂದೆಯೂ ಕಿರು ಉದ್ದಿಮೆಗಳಿಗೆ ನೆರವಾಗುವ ನೀತಿಗಳನ್ನೇ ನಾವು ಹೊಂದಿರುತ್ತೇವೆ ಎಂದು ಫೇಸ್ಬುಕ್ ತಿಳಿಸಿದೆ. ತನ್ನ ಆದಾಯದ ಒಟ್ಟು ಶೇ 98ರಷ್ಟು ಭಾಗವನ್ನು ಟಾರ್ಗೆಟ್ ಆಡಿಯೆನ್ಸ್ಗೆ ಜಾಹೀರಾತು ತಲುಪಿಸುವುದರಿಂದಲೇ ಪಡೆಯುವ ಫೇಸ್ಬುಕ್, ಇದಕ್ಕೆ ಪ್ರತಿಯಾಗಿ ವಿವಿಧ ಸೇವೆಗಳನ್ನು ಉಚಿತವಾಗಿ ಒದಗಿಸುವ ಬಗ್ಗೆ ಪ್ರಸ್ತಾಪಿಸುತ್ತಿದೆ.
ಆದರೆ ಆ್ಯಪಲ್ ಕಂಪನಿ ಮಾತ್ರ ತನ್ನ ಬಳಕೆದಾರರಿಗೆ ಫೇಸ್ಬುಕ್ನಿಂದ ಸಿಗಬಹುದಾದ ಉಳಿದೆಲ್ಲಾ ಅನುಕೂಲಗಳಿಗಿಂತ ಬಳಕೆದಾರರ ದತ್ತಾಂಶ ಸೋರಿಕೆ ತಡೆಯುವುದೇ ಆದ್ಯತೆ ಎಂಬ ನಿಲುವು ತಳೆದಿದೆ. ‘ತಮ್ಮ ಬಗ್ಗೆ ಏನೆಲ್ಲಾ ಮಾಹಿತಿ ಸಂಗ್ರಹಿಸಲಾಗುತ್ತಿದೆ ಮತ್ತು ಅದನ್ನು ಹೇಗೆಲ್ಲಾ ಬಳಸಲಾಗುತ್ತದೆ ಎಂದು ತಿಳಿಯುವ ಹಕ್ಕು ಬಳಕೆದಾರರಿಗೆ ಇದೆ. ಫೇಸ್ಬುಕ್ ಇನ್ನು ಮುಂದೆಯೂ ಆ್ಯಪ್ಗಳಲ್ಲಿ, ವೆಬ್ಸೈಟ್ಗಳಲ್ಲಿ ತನಗೆ ಬೇಕಾದ ಮಾಹಿತಿ ಸಂಗ್ರಹಿಸಬಹುದು. ಆದರೆ ಬಳಕೆದಾರರ ಅನುಮತಿಯನ್ನು ಐಒಎಸ್ 14 ಕಡ್ಡಾಯಗೊಳಿಸುತ್ತದೆ’ ಎಂದು ಆ್ಯಪಲ್ ಕಂಪನಿಯ ಸಿಇಒ ಟಿಮ್ಕುಕ್ ಟ್ವೀಟ್ ಮಾಡಿದ್ದಾರೆ.
We believe users should have the choice over the data that is being collected about them and how it’s used. Facebook can continue to track users across apps and websites as before, App Tracking Transparency in iOS 14 will just require that they ask for your permission first. pic.twitter.com/UnnAONZ61I
— Tim Cook (@tim_cook) December 17, 2020
ಫೇಸ್ಬುಕ್ ವಿರುದ್ಧ ಅಮೆರಿಕ ಸರ್ಕಾರದಿಂದ ಮೊಕದ್ದಮೆ; ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ
Published On - 8:51 pm, Fri, 18 December 20