
ವಾಷಿಂಗ್ಟನ್, ಅಕ್ಟೋಬರ್ 08: ಜಾಗತಿಕವಾಗಿ ಎಂಟು ಪ್ರಮುಖ ಯುದ್ಧ ಹಾಗೂ ಸಂಘರ್ಷಗಳನ್ನು ತಾವೇ ಖುದ್ದು ಮಧ್ಯಸ್ಥಿಕೆ ವಹಿಸಿ ಇತ್ಯರ್ಥಪಡಿಸಿದ್ದೇನೆ ಎಂದು ಹೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮಗೆ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಶ್ವೇತ ಭವನದ ಓವಲ್ ಕಚೇರಿಯಲ್ಲಿ
ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನೊಬೆಲ್ ಸಮಿತಿಯ ಅಂತಿಮ ತೀರ್ಮಾನ ಏನಾಗಲಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ ನನ್ನಂತಹ ದಿಟ್ಟ ವ್ಯಕ್ತಿಗಳಿಗೆ ಪ್ರಶಸ್ತಿ ನೀಡದಿರುವ ಕೆಟ್ಟ ಖ್ಯಾತಿ ಆ ಸಮಿತಿಗಿದೆ. ನನಗಿದು ಸಿಗಲಿ ಅಥವಾ ಸಿಗದಿರಲಿ, ನಾನು ಶಾಂತಿಗಾಗಿ ಗಣನೀಯ ಸಾಧನೆ ಮಾಡಿದ್ದೇನೆ. ಒಂದು ವೇಳೆ ನನಗೆ ಪ್ರಶಸ್ತಿ ನೀಡದಿದ್ದರೆ ಅದು ಆ ಸಮಿತಿಗೇ ದೊಡ್ಡ ಅಪಖ್ಯಾತಿಯಾಗುತ್ತದೆ” ಎಂದು ನೇರವಾಗಿ ಹೇಳಿದ್ದಾರೆ.
ಶ್ವೇತಭವನಕ್ಕೆ ಮರಳಿದ ಬಳಿಕ ಜಾಗತಿಕ ರಂಗದಲ್ಲಿ ಎಂಟು ಯುದ್ಧ ಪರಿಸ್ಥಿತಿಗಳನ್ನು ಶಮನಗೊಳಿಸಿದ್ದೇನೆ ಮತ್ತು ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ಕಠಿಣ ನಿರ್ಧಾರಗಳ ಮೂಲಕ ತಡೆದಿದ್ದೇನೆ ಎಂದು ಟ್ರಂಪ್ ಪ್ರತಿಪಾದಿಸಿದರು. ವೆನೆಜುವೆಲಾದ ವಿರೋಧ ಪಕ್ಷದ ಪ್ರಮುಖ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಶಾಂತಿ ಪ್ರಶಸ್ತಿ ಘೋಷಣೆಯಾದ ಸಂದರ್ಭವನ್ನು ಸ್ಮರಿಸಿದ ಟ್ರಂಪ್, “ಅವರು ಇತಿಹಾಸದಲ್ಲಿ ನನಗಿಂತ ಹೆಚ್ಚು ಅರ್ಹರು ಯಾರೂ ಇಲ್ಲ ಎಂದು ಹೇಳಿ ಗೌರವಿಸಿದ್ದರು” ಎಂದರು.
ಮತ್ತಷ್ಟು ಓದಿ: ಇರಾನ್‌ನ 7 ದಿನಗಳ ಕದನ ವಿರಾಮ ಆಫರ್ ತಿರಸ್ಕರಿಸಿದ ಡೊನಾಲ್ಡ್ ಟ್ರಂಪ್:ಸೋಲಿನ ಭೀತಿಯಿಂದ ಒಪ್ಪಂದಕ್ಕೆ ಬಂದಿದ್ದಾರೆ ಎಂದ ಅಮೆರಿಕ ಅಧ್ಯಕ್ಷ
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ 2009ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ದನ್ನು ಟ್ರಂಪ್ ತೀವ್ರವಾಗಿ ಲೇವಡಿ ಮಾಡಿದರು. “ಒಬಾಮಾ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಏನನ್ನೂ ಸಾಧಿಸದೆ ಪ್ರಶಸ್ತಿ ಪಡೆದರು. ಆ ಪ್ರಶಸ್ತಿ ಅವರಿಗೆ ಏಕೆ ಬಂತು ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ” ಎಂದು ಟೀಕಿಸಿದರು.
ತಮ್ಮ ಮೊದಲ ಅವಧಿಯಲ್ಲೂ (2017-2021) ಇಸ್ರೇಲ್ ಮತ್ತು ಯುಎಇ ನಡುವಿನ ಐತಿಹಾಸಿಕ ‘ಅಬ್ರಹಾಂ ಒಪ್ಪಂದ’ (Abraham Accords) ಹಾಗೂ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರೊಂದಿಗೆ ನಡೆಸಿದ ಸಂಧಾನ ಸಭೆಗಳ ಹಿನ್ನೆಲೆಯಲ್ಲಿ ಟ್ರಂಪ್ ಹೆಸರು ನೊಬೆಲ್ ಶಾಂತಿ ಪ್ರಶಸ್ತಿಗೆ ಹಲವು ಬಾರಿ ನಾಮನಿರ್ದೇಶನಗೊಂಡಿತ್ತು.
ನಾರ್ವೇಜಿಯನ್ ನೊಬೆಲ್ ಸಮಿತಿಯು ಸಾಮಾನ್ಯವಾಗಿ ಸಂಘರ್ಷ ಶಮನ, ಅಹಿಂಸಾತ್ಮಕ ಹೋರಾಟ, ಹವಾಮಾನ ಬದಲಾವಣೆ ಅಥವಾ ಮಾನವ ಹಕ್ಕುಗಳ ರಕ್ಷಣೆಗೆ ಸುದೀರ್ಘ ಕೊಡುಗೆ ನೀಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಪರಿಗಣಿಸುತ್ತದೆ. ಆದರೆ, ಟ್ರಂಪ್ ಅವರ ಏಕಪಕ್ಷೀಯ ವಿದೇಶಾಂಗ ನೀತಿಗಳು ಮತ್ತು ವ್ಯಾಪಾರ ಯುದ್ಧಗಳ ನಿಲುವುಗಳಿಂದಾಗಿ ಸಮಿತಿಯು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ