ರಿಪಬ್ಲಿಕನ್ ಪಕ್ಷದ ಸಂಸದರಿಂದಲೂ ಟ್ರಂಪ್ ದೋಷಾರೋಪಣೆಗೆ ಬೆಂಬಲ

|

Updated on: Jan 14, 2021 | 10:55 AM

ಎರಡು ಬಾರಿ ದೋಷಾರೋಪಣೆಗೆ ಒಳಗಾದ ಡೊನಾಲ್ಡ್ ಟ್ರಂಪ್​ರ ನಿವೃತ್ತಿ ನಂತರದ ಭತ್ಯೆಗಳನ್ನು ತಡೆಹಿಡಿಯುವ ಅವಕಾಶಗಳು ಸಹ ಅಮೆರಿಕ ಕಾಂಗ್ರೆಸ್ ಎದುರಿಗಿದೆ.

ರಿಪಬ್ಲಿಕನ್ ಪಕ್ಷದ ಸಂಸದರಿಂದಲೂ ಟ್ರಂಪ್ ದೋಷಾರೋಪಣೆಗೆ ಬೆಂಬಲ
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
Follow us on

ವಾಷಿಂಗ್ಟನ್: ಡೋನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆಗೆ ಅವರ ರಿಪಬ್ಲಿಕನ್ ಪಕ್ಷದಿಂದಲೂ ಬೆಂಬಲ ದೊರೆತಿದೆ. ರಿಪಬ್ಲಿಕನ್ ಪಕ್ಷದ 10 ಸಂಸದರು ಡೊನಾಲ್ಡ್ ಟ್ರಂಪ್ ವಿರುದ್ಧದ ದೋಷಾರೋಪಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ದೋಷಾರೋಪಣೆ ಪರ ಅಮೆರಿಕ ಕಾಂಗ್ರೆಸ್​ನಲ್ಲಿ ಬಹುಮತ ದೊರಕಿದರೂ ಜನವರಿ 20 ರ ಒಳಗೆ ಡೋನಾಲ್ಡ್​ ಟ್ರಂಪ್​ ವಿಚಾರಣೆ ನಡೆಸಲಾಗದು. ಅಥವಾ ಜನವರಿ 20 ರೊಳಗೆ ಅಧಿಕಾರದಿಂದ ಇಳಿಯುವಂತೆ ಮಾಡಲಾಗದು. ಅಲ್ಲದೇ 2024 ರ ಅಮೆರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಸಹ ತಡೆಗಟ್ಟಲಾಗದು. ಭವಿಷ್ಯದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಂತೆ ತಡೆಯಲು ಇನ್ನಷ್ಟು ಸಂಸದರ ಬೆಂಬಲ ಅಗತ್ಯವಿದೆ ಎಂದು ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಆಳ ಅಗಲ ಬಲ್ಲವರು ವಿವರಿಸುತ್ತಾರೆ.

ನಿವೃತ್ತಿ ಪಿಂಚಣಿ ತಡೆಹಿಡಿಯುವ ಅವಕಾಶ
ದೋಷಾರೋಪಣೆ ಸಾಬೀತಿನಿಂದ ಅಧ್ಯಕ್ಷ ಪದವಿಯಿಂದ ಕೆಳಕ್ಕಿಳಿದ ನಂತರ ಅವರು ಪಡೆಯಬಹುದಾಗಿದ್ದ ಸೌಲಭ್ಯಗಳಿಂದ ವಂಚಿತರಾಗುವ ಸಂಭವವಿದೆ. ಅಮೆರಿಕ ಕಾಂಗ್ರೆಸ್ ಡೊನಾಲ್ಡ್ ಟ್ರಂಪ್​ ಅಧ್ಯಕ್ಷ ಸ್ಥಾನದಿಂದ ಇಳಿದ ನಂತರ ದೊರಕಬೇಕಿದ್ದ, 2 ಲಕ್ಷ ವಾರ್ಷಿಕ ಪಿಂಚಣಿ ಮತ್ತು 10 ಲಕ್ಷ ಪ್ರವಾಸ ಭತ್ಯೆಯನ್ನು ತಡೆಯಬಹುದಾಗಿದೆ.

ಕೊನೆಗೂ ಪ್ರತಿಕ್ರಿಯಿಸಿದ ಟ್ವಿಟರ್ ಸಿಇಒ
ಟ್ವಿಟರ್ ಸಿಇಒ ಜಾಕ್ ಡೋರ್ಸೆ ಕೊನೆಗೂ ಮೌನ ಮುರಿದಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ಬೆಂಬಲಿಗರ ಖಾತೆ ರದ್ದು ‘ಸರಿಯಾದ ನಿರ್ಧಾರ’ ಎಂದು ಅವರು ವ್ಯಾಖ್ಯಾನಿಸಿದ್ದು, ಅದೊಂದು ಅಪಾಯದ ನಿರ್ಧಾರವಾಗಿತ್ತು ಎಂದಿದ್ದಾರೆ. ಏಕೈಕ ವ್ಯಕ್ತಿಯ ಬಳಿ ಅಧಿಕಾರ ಕೇಂದ್ರೀಕರಣವಾಗುವುದು ಸಮಾಜಕ್ಕೆ ಹಾನಿಕರ ಎಂದು ವಿವರಿಸುವ ಅವರು, ಈ ಪ್ರಕ್ರಿಯೆಯಲ್ಲಿ ಆರೋಗ್ಯಕರ ಸಂವಾದ ನಡೆಸಬಹುದಾದ ಅವಕಾಶವನ್ನು ಬಳಸಿಕೊಳ್ಳಲು ಟ್ವಿಟರ್ ವಿಫಲವಾಯಿತು. ಸಾರ್ವಜನಿಕ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆ ಎಂದು ಅವರು ತಿಳಿಸಿದ್ದಾರೆ.

ಖಾತೆ ರದ್ದುಗೊಳಿಸುವ ಮುನ್ನ ಡೊನಾಲ್ಡ್ ಟ್ರಂಪ್​ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ, ಡೊನಾಲ್ಡ್ ಟ್ರಂಪ್ ಮತ್ತು ಬೆಂಬಲಿಗರು ಹಿಂಸಾತ್ಮಕ ಸಂದೇಶಗಳನ್ನು ನಿಲ್ಲಿಸಲಿಲ್ಲ. ಹೀಗಾಗಿ, 8.87 ಕೋಟಿ ಹಿಂಬಾಲಕರಿದ್ದ ಡೊನಾಲ್ಡ್ ಟ್ರಂಪ್ ಖಾತೆ ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಹಿತರಕ್ಷಣೆಗಾಗಿ ಸ್ನಾಪ್​ಚಾಟ್ ಡೊನಾಲ್ಡ್ ಟ್ರಂಪ್​ರಿಗೆ ಖಾಯಂ ನಿಷೇಧ ಹೇರಿದೆ. ತನ್ನ ನಿಯಮಾವಳಿಗಳನ್ನು ಡೊನಾಲ್ಡ್ ಟ್ರಂಪ್ ಗಾಳಿಗೆ ತೂರಿದ್ದಾರೆ ಎಂದು ಸ್ನಾಪ್​ಚಾಟ್ ತಿಳಿಸಿದೆ.

ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆ ವೇಳೆ ಹಿಂಸಾಚಾರ: ಮಹಿಳೆ ಸೇರಿ ನಾಲ್ವರು ಸಾವು