ಹಾರ್ಮುಜ್ ಜಲಸಂಧಿಯ ಹಡಗುಗಳ ಮೇಲಿನ ಶೇ. 20ರಷ್ಟು ಶುಲ್ಕ ಹಿಂಪಡೆದ ಟ್ರಂಪ್; ಹೊಸ ಘೋಷಣೆಯೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ಹಡಗುಗಳ ಮೇಲೆ ಶೇ. 20ರಷ್ಟು ಶುಲ್ಕ ವಿಧಿಸುವ ತಮ್ಮದೇ ನಿರ್ಧಾರದಿಂದ ದಿಢೀರ್ ಯು-ಟರ್ನ್ ಹೊಡೆದಿದ್ದಾರೆ. ಈ ವಿವಾದಾತ್ಮಕ ಪ್ರಸ್ತಾಪವನ್ನು ಸಂಪೂರ್ಣವಾಗಿ ಹಿಂಪಡೆದಿರುವ ಅವರು, ಇದರ ಬದಲಾಗಿ ಗಲ್ಫ್ ರಾಷ್ಟ್ರಗಳು ಅಮೆರಿಕದಲ್ಲಿ ಬೃಹತ್ ವ್ಯಾಪಾರ ಮತ್ತು ಹೂಡಿಕೆಗಳನ್ನು ಮಾಡಲಿವೆ ಎಂದು ಘೋಷಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯಂತಹ ಆಯಕಟ್ಟಿನ ಸಮುದ್ರ ಮಾರ್ಗದಲ್ಲಿ ಚಲಿಸುವ ವಾಣಿಜ್ಯ ಹಡಗುಗಳಿಗೆ ಶೇ. 20ರಷ್ಟು ಅಮೆರಿಕ ಮರುಪಾವತಿ ಶುಲ್ಕ ವಿಧಿಸುವುದಾಗಿ ಘೋಷಿಸಿ ಕೇವಲ ಒಂದೇ ದಿನವಾಗಿತ್ತು.

ಹಾರ್ಮುಜ್ ಜಲಸಂಧಿಯ ಹಡಗುಗಳ ಮೇಲಿನ ಶೇ. 20ರಷ್ಟು ಶುಲ್ಕ ಹಿಂಪಡೆದ ಟ್ರಂಪ್; ಹೊಸ ಘೋಷಣೆಯೇನು?
Donald Trump
Image Credit source: AP

Updated on: Jul 14, 2026 | 10:22 PM

ಮುಖ್ಯಾಂಶಗಳು

  • ಒಂದೇ ದಿನದಲ್ಲಿ ಯು-ಟರ್ನ್ ಹೊಡೆದ ಟ್ರಂಪ್
  • ಹಾರ್ಮುಜ್ ಹಡಗುಗಳ ಮೇಲಿನ ಸುಂಕ ಹಿಂಪಡೆದ ಅಮೆರಿಕ
  • ಟ್ರಂಪ್ ಮಾಡಿದ ಹೊಸ ಘೋಷಣೆಯೇನು?

ವಾಷಿಂಗ್ಟನ್, ಜುಲೈ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಹಾದುಹೋಗುವ ವಾಣಿಜ್ಯ ಹಡಗುಗಳ ಮೇಲೆ ಶೇ. 20ರಷ್ಟು ಶುಲ್ಕ ವಿಧಿಸುವ ತಮ್ಮದೇ ಪ್ರಸ್ತಾಪವನ್ನು ಇಂದು ಹಿಂಪಡೆದಿದ್ದಾರೆ. ಈ ಶುಲ್ಕದ ಬದಲಾಗಿ ಗಲ್ಫ್ ರಾಷ್ಟ್ರಗಳೊಂದಿಗೆ ಹೊಸ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗುವುದು ಎಂದು ಅವರು ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಟ್ರುತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಮಧ್ಯಪ್ರಾಚ್ಯದ ನಾಯಕರೊಂದಿಗೆ ನಡೆದ ಮಾತುಕತೆಗಳ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಪೋಸ್ಟ್ ಇಲ್ಲಿದೆ:

“ಮಧ್ಯಪ್ರಾಚ್ಯದ ನಾಯಕರೊಂದಿಗೆ ನಡೆದ ಅತ್ಯಂತ ಯಶಸ್ವಿ ಮಾತುಕತೆಗಳ ಬಳಿಕ ನಾನು ಶೇ. 20ರಷ್ಟು ಅಮೆರಿಕ ಮರುಪಾವತಿ ಶುಲ್ಕದ ಪ್ರಸ್ತಾಪವನ್ನು ಹಿಂಪಡೆಯಲು ನಿರ್ಧರಿಸಿದ್ದೇನೆ. ಇದರ ಬದಲಿಗೆ ವಿವಿಧ ಗಲ್ಫ್ ರಾಷ್ಟ್ರಗಳು ಅಮೆರಿಕದಲ್ಲಿ ಮಾಡಲಿರುವ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳನ್ನು ಜಾರಿಗೆ ತರಲಾಗುವುದು” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಹಾರ್ಮುಜ್ ಜಲಸಂಧಿಯ ಮೂಲಕ ಚಲಿಸುವ ಹಡಗುಗಳಿಗೆ ಶೇ. 20ರಷ್ಟು ಶುಲ್ಕ ವಿಧಿಸುವುದಾಗಿ ಘೋಷಿಸಿದ ಕೇವಲ ಒಂದೇ ದಿನದಲ್ಲಿ ಟ್ರಂಪ್ ಈ ನಿರ್ಧಾರವನ್ನು ಬದಲಾಯಿಸಿದ್ದಾರೆ.


ಈ ನಿರ್ಧಾರದ ಪರಿಣಾಮವೇನು?:

ಟ್ರಂಪ್ ಈ ಶೇ. 20ರಷ್ಟು ಶುಲ್ಕವನ್ನು ಹಿಂಪಡೆದಿರುವುದರಿಂದ, ಹಾರ್ಮುಜ್ ಜಲಸಂಧಿಯನ್ನು ಬಳಸುವ ಜಾಗತಿಕ ಹಡಗು ಸಾರಿಗೆ ಕಂಪನಿಗಳಿಗೆ ತಕ್ಷಣ ಎದುರಾಗಿದ್ದ ಹೆಚ್ಚುವರಿ ಆರ್ಥಿಕ ಹೊರೆಯ ಭೀತಿ ತಪ್ಪಿದಂತಾಗಿದೆ. ಆದರೆ, ಇರಾನ್ ದೇಶಕ್ಕೆ ಲಿಂಕ್ ಹೊಂದಿರುವ ಹಡಗುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನವು ಕಡಲ ವ್ಯಾಪಾರಕ್ಕೆ, ವಿಶೇಷವಾಗಿ ಇರಾನ್ ಬಂದರುಗಳು ಅಥವಾ ಸರಕುಗಳಿಗೆ ಸಂಬಂಧಿಸಿದ ಹಡಗುಗಳಿಗೆ ಅಡ್ಡಿಪಡಿಸುವುದನ್ನು ಮುಂದುವರಿಸಬಹುದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಮಹಾ ಸುಂಕದ ಸಮರ, ಟ್ರಂಪ್ ಅವರ ಶೇ.20 ಶುಲ್ಕದ ಬೇಡಿಕೆಗೆ ಇರಾನ್ ಕೌಂಟರ್

ಹಾರ್ಮುಜ್ ಜಲಸಂಧಿಯ ಮಹತ್ವ:

ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಗಲ್ಫ್ ಅನ್ನು ಒಮಾನ್ ಗಲ್ಫ್ ಮತ್ತು ಅರಬ್ಬೀ ಸಮುದ್ರದೊಂದಿಗೆ ಜೋಡಿಸುವ ವಿಶ್ವದ ಅತ್ಯಂತ ಪ್ರಮುಖ ಕಡಲ ಮಾರ್ಗವಾಗಿದೆ. ಜಾಗತಿಕ ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗ (ಶೇ. 20ರಷ್ಟು) ಪ್ರತಿದಿನ ಇದೇ ಕಿರಿದಾದ ಮಾರ್ಗದ ಮೂಲಕ ಹಾದುಹೋಗುತ್ತದೆ. ಹಾಗಾಗಿ, ಇಲ್ಲಿ ಯಾವುದೇ ಅಡಚಣೆ ಉಂಟಾದರೂ ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಲಿದ್ದು, ಹಡಗು ಸಾರಿಗೆ ವೆಚ್ಚ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:22 pm, Tue, 14 July 26

Follow Us