
ವಾಷಿಂಗ್ಟನ್, ಜೂನ್ 19: ಕೊರೊನಾ ವೈರಸ್ ಉಗಮದ ಕುರಿತು ಅಮೆರಿಕದ ರಾಜಕೀಯ ವಲಯದಲ್ಲಿ ಭಾರಿ ಬಾಂಬ್ ಸಿಡಿದಿದೆ. ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿದ್ದ ತುಳಸಿ ಗಬ್ಬಾರ್ಡ್(Tulsi Gabbard) ರಾಜೀನಾಮೆ ನೀಡಿ ಹೊರ ಹೋಗುವ ಮುನ್ನ ಅಮೆರಿಕದ ಮಾಜಿ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಾಗತಿಕ ಸಾಂಕ್ರಾಮಿಕಕ್ಕೆ ಕಾರಣವಾದ ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆದ ಅಪಾಯಕಾರಿ ಸಂಶೋಧನೆಗೆ ಫೌಸಿ ಅವರು ಅಮೆರಿಕದ ತೆರಿಗೆದಾರರ ಹಣವನ್ನು ಒದಗಿಸಿದ್ದರು ಎಂದು ಗಬ್ಬಾರ್ಡ್ ಬಹಿರಂಗಪಡಿಸಿದ್ದಾರೆ.
ಗುಪ್ತಚರ ನಿರ್ದೇಶಕಿಯಾಗಿ ತಮ್ಮ ಕೊನೆಯ ಕೆಲಸದ ದಿನದಂದು ಗಬ್ಬಾರ್ಡ್ ಅವರು ಅಧಿಕೃತ ಇಲಾಖಾ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಗಳು ಮತ್ತು ಪತ್ರವ್ಯವಹಾರಗಳ ಆಧಾರದ ಮೇಲೆ ಈ ಮಾಹಿತಿ ನೀಡಿದ್ದಾರೆ.
ಡಾ. ಫೌಸಿ ಮುಖ್ಯಸ್ಥರಾಗಿದ್ದ ಅಮೆರಿಕದ ‘ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ’ (NIAID) ಮೂಲಕ ಚೀನಾದ ವುಹಾನ್ ಲ್ಯಾಬ್‌ನಲ್ಲಿ ಬಾವಲಿ ಹಾಗೂ ಕೊರೊನಾ ವೈರಸ್‌ಗಳ ಕುರಿತು ನಡೆಸಲಾಗುತ್ತಿದ್ದ ಅಪಾಯಕಾರಿ ‘ಗೇನ್ ಆಫ್ ಫಂಕ್ಷನ್’ಸಂಶೋಧನೆಗೆ ಲಕ್ಷಾಂತರ ಅಮೆರಿಕನ್ ಡಾಲರ್ ಹಣವನ್ನು ನೀಡಲಾಗಿತ್ತು.
ತಾವು ಮಾಡಿದ ತಪ್ಪನ್ನು ಮುಚ್ಚಿಡಲು ಫೌಸಿ ಅವರು ಗುಪ್ತಚರ ಇಲಾಖೆಯೊಳಗಿನ ಕೆಲವು ರಾಜಕೀಯ ಪ್ರಭಾವಿ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದರು ಮತ್ತು ಅಮೆರಿಕದ ಸಂಸತ್ತಿಗೆ ಪ್ರಮಾಣವಚನ ಸ್ವೀಕರಿಸಿ ಸುಳ್ಳು ಹೇಳಿದ್ದರು ಎಂದು ಗಬ್ಬಾರ್ಡ್ ಆರೋಪಿಸಿದ್ದಾರೆ.
ಮತ್ತಷ್ಟು ಓದಿ: Tulsi Gabbard Resigns: ಟ್ರಂಪ್ ಸರ್ಕಾರದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ರಾಜೀನಾಮೆ
ಮಾಹಿತಿ ಸೋರಿಕೆ ಮಾಡಿದವರ ವಜಾ: ಇಲಾಖೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ವುಹಾನ್ ಲ್ಯಾಬ್ ಸೋರಿಕೆಯ ಸತ್ಯವನ್ನು ಗುಪ್ತಚರ ಇಲಾಖೆಗೆ ತಿಳಿಸಲು ಮುಂದೆ ಬಂದ ಮಾಹಿತಿ ದಾರರನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿತ್ತು.
‘ಗೇನ್ ಆಫ್ ಫಂಕ್ಷನ್’ ಸಂಶೋಧನೆ ಎಂದರೇನು?
ವೈರಸ್ ಶಕ್ತಿ ಹೆಚ್ಚಿಸುವ ಪ್ರಯೋಗ: ಇದು ವಿಜ್ಞಾನಿಗಳು ಒಂದು ಜೀವಿಯ ಅಥವಾ ವೈರಸ್‌ನ ಜೈವಿಕ ಕಾರ್ಯಗಳನ್ನು, ಅದರ ರೋಗ ಹರಡುವ ಸಾಮರ್ಥ್ಯವನ್ನು ಕೃತಕವಾಗಿ ಹೆಚ್ಚಿಸಲು ತಳೀಯವಾಗಿ (Genetically) ಮಾರ್ಪಡಿಸುವ ಸಂಶೋಧನೆಯಾಗಿದೆ. ವುಹಾನ್ ಪ್ರಯೋಗಾಲಯದಲ್ಲಿ ನಡೆದ ಇಂತಹದೇ ಅಪಾಯಕಾರಿ ಪ್ರಯೋಗದ ಅಚಾತುರ್ಯದ ಸೋರಿಕೆಯಿಂದಲೇ ಕೋವಿಡ್ ಜಗತ್ತನ್ನು ಆವರಿಸಿತು ಎಂದು ನಂಬಲಾಗಿದೆ.
ವಿಡಿಯೋ
Today, on my final day as Director of National Intelligence, I’m releasing never-before-seen communications and documents exposing how Dr. Fauci provided millions in US taxpayer dollars to fund dangerous gain-of-function research at the Wuhan lab, worked with politicized elements… pic.twitter.com/ZMdliW4zyS
— DNI Tulsi Gabbard (@DNIGabbard) June 19, 2026
ಕೋವಿಡ್ ವೈರಸ್ ಚೀನಾದ ವೆಟ್ ಮಾರುಕಟ್ಟೆಯಿಂದ ಹರಡಿದೆ ಎಂದು ಈ ಮುಂಚೆ ವಿಜ್ಞಾನಿಗಳು ಬಿಂಬಿಸಿದ್ದರು. ಆದರೆ ಈಗ ಸತ್ಯ ಹೊರಬರುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿರುವ ತುಳಸಿ ಗಬ್ಬಾರ್ಡ್, ಇದೊಂದು ಉದ್ದೇಶಪೂರ್ವಕ ಸಂಚು ಎಂದು ಬಿಂಬಿಸುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಬೆಳವಣಿಗೆಯು ಅಮೆರಿಕ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ