
ನ್ಯೂಯಾರ್ಕ್, ಅಕ್ಟೋಬರ್ 05: ಅಮೆರಿಕದ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಗಾಯಕಿ ಹಾಗೂ ರಾಜಕೀಯ ವ್ಯಾಖ್ಯಾನಕಾರ್ತಿ ಅಲೆಕ್ಸಿಸ್ ವಿಲ್ಕಿನ್ಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 27 ವರ್ಷದ ಅಲೆಕ್ಸಿಸ್ ಅವರು 46 ವರ್ಷದ ಕಾಶ್ ಪಟೇಲ್ ಜೊತೆಗಿನ ಕಪ್ಪು-ಬಿಳುಪು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದಾರೆ. “Went and got the law involved” ಎಂದು ಅವರು ಪೋಸ್ಟ್‌ಗೆ ತಮಾಷೆಯಾಗಿ ಶೀರ್ಷಿಕೆ ನೀಡಿದ್ದಾರೆ. ಪಟೇಲ್ ಕೂಡ ಈ ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದಾರೆ.
ಎಫ್‌ಬಿಐ ಇತಿಹಾಸದಲ್ಲೇ ಅತ್ಯುನ್ನತ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಇವರ ಪೋಷಕರು ಮೂಲತಃ ಗುಜರಾತ್‌ನವರಾಗಿದ್ದು, ನಂತರ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅವರು ಭಗವದ್ಗೀತೆಯ ಮೇಲೆ ಕೈಯಿಟ್ಟು ಎಫ್‌ಬಿಐ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ವೃತ್ತಿಯಿಂದ ವಕೀಲರಾಗಿರುವ ಕಾಶ್ ಪಟೇಲ್ , ಈ ಹಿಂದೆ ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಸ್ಥರ ಸಿಬ್ಬಂದಿ ಮುಖ್ಯಸ್ಥರಾಗಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಲೆಕ್ಸಿಸ್ ವಿಲ್ಕಿನ್ಸ್ ಅಮೆರಿಕದ ಗಾಯಕಿ ಮತ್ತು ರಾಜಕೀಯ ವ್ಯಾಖ್ಯಾನಕಾರ್ತಿ. ಅವರು 2023ರಲ್ಲಿ ತಮ್ಮ ಮೊದಲ ಸಂಗೀತ ಆಲ್ಬಂ ಬಿಡುಗಡೆ ಮಾಡಿದ್ದರು. ಸಂಪ್ರದಾಯವಾದಿ ಸಂಘಟನೆಗಳು ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.ಅಲೆಕ್ಸಿಸ್ ಮತ್ತು ಕಾಶ್ ಪಟೇಲ್ 2022ರಲ್ಲಿ ನ್ಯಾಶ್‌ವಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು ಎಂದು ವರದಿಯಾಗಿದೆ. 2023ರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. 2025ರಲ್ಲಿ ಪಟೇಲ್ ಎಫ್‌ಬಿಐ ನಿರ್ದೇಶಕರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲೂ ಅಲೆಕ್ಸಿಸ್ ಭಾಗವಹಿಸಿದ್ದರು.
ಮತ್ತಷ್ಟು ಓದಿ: ಶ್ವೇತಭವನದಲ್ಲಿ ಟೆಕ್ ದಿಗ್ಗಜರ ಸಭೆ: ಸುಂದರ್ ಪಿಚೈ ಅವರನ್ನು ಮಾನ್ಸ್ಟರ್ ಎಂದು ಕರೆದ ಡೊನಾಲ್ಡ್ ಟ್ರಂಪ್
ಅಲೆಕ್ಸಿಸ್ ಸಂಗೀತ ಕ್ಷೇತ್ರದ ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಲ್ಲೂ ಸಕ್ರಿಯರಾಗಿದ್ದಾರೆ. ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ‘Great American State Fair’ ಕಾರ್ಯಕ್ರಮದಲ್ಲೂ ಅವರು ಪ್ರದರ್ಶನ ನೀಡಿದ್ದರು.
❤️💍
— Kash Patel (@Kash_Patel) October 4, 2026
ಪೋಸ್ಟ್
ಎಫ್‌ಬಿಐ ನಿರ್ದೇಶಕರಾಗಿ ಕಾಶ್ ಪಟೇಲ್ ಅವರ ವೈಯಕ್ತಿಕ ಮತ್ತು ಅಧಿಕೃತ ಪ್ರಯಾಣಗಳ ಕುರಿತು ಈ ಹಿಂದೆ ಪ್ರಶ್ನೆಗಳು ಎದ್ದಿದ್ದವು. ವಿಶೇಷವಾಗಿ ಸರ್ಕಾರಿ ವಿಮಾನ ಬಳಕೆಯ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಒಂದು ಸಂದರ್ಭದಲ್ಲಿ ಪೆನ್ಸಿಲ್ವೇನಿಯಾದ ಸ್ಟೇಟ್ ಕಾಲೇಜಿಗೆ ವಿಮಾನದಲ್ಲಿ ತೆರಳಿದ್ದಾಗ, ಅಲ್ಲಿ ಅಲೆಕ್ಸಿಸ್ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡಿದ್ದರು ಎಂದು ವರದಿಯಾಗಿದೆ. ಈ ವಿಷಯವೂ ಸಾರ್ವಜನಿಕ ಚರ್ಚೆಗೆ ಕಾರಣವಾಗಿತ್ತು.ಇದೀಗ ನಿಶ್ಚಿತಾರ್ಥದ ಘೋಷಣೆಯೊಂದಿಗೆ ಕಾಶ್ ಪಟೇಲ್ ಮತ್ತು ಅಲೆಕ್ಸಿಸ್ ವಿಲ್ಕಿನ್ಸ್ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ