Kannada News World Gujarat Morbi cable bridge collapse in the last 20 years Bridge collapse Tragedies details in kannada
ಕಳೆದ 20 ವರ್ಷಗಳಲ್ಲಿ ಸಂಭವಿಸಿದ ಸೇತುವೆ ದುರಂತಗಳು ಮತ್ತು ಸಾವುನೋವುಗಳು
ಸೇತುವೆ ಕುಸಿತ ಪ್ರಕರಣಗಳು ಭಾರತದಲ್ಲಿ ಮಾತ್ರವಲ್ಲ ಬೇರೆಬೇರೆ ದೇಶಗಳಲ್ಲೂ ಸಂಭವಿಸುತ್ತದೆ. ಈ ಹಿಂದೆಯೂ ಅನೇಕ ದುರಂತಗಳು ನಡೆದಿದ್ದು, ಅನೇಕ ಸಾವು-ನೋವುಗಳಾಗಿವೆ.
ವಿಶ್ವದಲ್ಲಿ ಸಂಭವಿಸಿದ ಸೇತುವೆ ದುರಂತಗಳು (ಚಿತ್ರ: ಗುಜರಾತ್ನಲ್ಲಿ ಭಾನುವಾರ ಸಂಭವಿಸಿದ ಕೇಬಲ್ ಸೇತುವೆ ದುರಂತ)
Follow us on
ಕಾರಣಗಳು ಏನೇ ಇರಲಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಸೇತುವೆ ಕುಸಿತ ದುರಂತಗಳು ಸಂಭವಿಸಿವೆ. ಕಳೆದ ಎರಡು ದಶಕಗಳಲ್ಲಿ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಸೇತುವೆ ದುರಂತಗಳು ಸಂಭವಿಸಿ ಅನೇಕ ಸಾವು-ನೋವುಗಳು ಆಗಿವೆ. ಭಾನುವಾರ (ಅ 30)ದಂದು ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಕೇಬಲ್ ಸೇತುವೆ ಕುಸಿದು ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೇ ರೀತಿ ಕಳೆದ 20 ವರ್ಷಗಳಲ್ಲಿ ವಿವಿಧ ದೇಶಗಳಲ್ಲಿ ಸಂಭವಿಸಿದ ದುರಂತಗಳು ಇಲ್ಲಿವೆ ನೋಡಿ.
2003ರ ಸೇತುವೆ ದುರಂತ: ಆಗಸ್ಟ್‌ನಲ್ಲಿ ಭಾರತದ ಮುಂಬೈ ಬಳಿ ಸೇತುವೆ ಕುಸಿದು ಶಾಲಾ ಬಸ್ ಮತ್ತು ಇತರ ನಾಲ್ಕು ವಾಹನಗಳು ನದಿಗೆ ಬಿದ್ದಿತ್ತು. ಈ ದುರ್ಘಟನೆಯಲ್ಲಿ 19 ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದ್ದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಬೊಲಿವಿಯಾದಲ್ಲಿ ಬಸ್‌ವೊಂದು ರಸ್ತೆ ಸೇತುವೆಯನ್ನು ದಾಟುತ್ತಿರುವಾಗ ಪ್ರವಾಹಕ್ಕೆ ಸಿಲುಕಿ ಕನಿಷ್ಠ 29 ಜನರು ಸಾವನ್ನಪ್ಪಿದ್ದರು.
2006ರ ಸೇತುವೆ ದುರಂತ: ಆಗಸ್ಟ್‌ನಲ್ಲಿ ಮಾನ್ಸೂನ್ ಮಳೆಯಿಂದಾಗಿ ಪಾಕಿಸ್ತಾನ ದೇಶದ ವಾಯುವ್ಯದಲ್ಲಿರುವ ಪೇಶಾವರದಿಂದ 50 ಕಿಲೋಮೀಟರ್ ದೂರದಲ್ಲಿರುವ ಮರ್ದಾನ್‌ನಲ್ಲಿ ಸೇತುವೆ ಕೊಚ್ಚಿಹೋಗಿತ್ತು. ಈ ಘಟನೆಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದರು. ಡಿಸೆಂಬರ್ ತಿಂಗಳಲ್ಲಿ ಭಾರತದ ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ರೈಲಿನ ಮೇಲೆ 150 ವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದು ಕನಿಷ್ಠ 34 ಜನರು ಸಾವನ್ನಪ್ಪಿದ್ದರು.
2007ರ ಸೇತುವೆ ದುರಂತ: ಆಗಸ್ಟ್‌ನಲ್ಲಿ ಚೀನಾದ ಮಧ್ಯ ಹುನಾನ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದ ನದಿ ಸೇತುವೆಯೊಂದು ಕುಸಿದು ಬಿದ್ದು ಕನಿಷ್ಠ 64 ಕಾರ್ಮಿಕರು ಸಾವನ್ನಪ್ಪಿದ್ದರು. ಇನ್ನು ಡಿಸೆಂಬರ್‌ನಲ್ಲಿ ನೇಪಾಳ ದೇಶದ ಪಶ್ಚಿಮದಲ್ಲಿ ಯಾತ್ರಾರ್ಥಿಗಳಿಂದ ತುಂಬಿದ್ದ ಸೇತುವೆ ಕುಸಿದು ಕನಿಷ್ಠ 16 ಜನರು ಸಾವನ್ನಪ್ಪಿದ್ದರು ಮತ್ತು 25 ಮಂದಿ ಕಾಣೆಯಾಗಿದ್ದರು. ಅಪಘಾತದ ಸಮಯದಲ್ಲಿ ಸುಮಾರು 400 ಜನರು ರಾಜಧಾನಿ ಕಠ್ಮಂಡುವಿನಿಂದ ಪಶ್ಚಿಮಕ್ಕೆ 380 ಕಿಲೋಮೀಟರ್ ದೂರದಲ್ಲಿರುವ ಭೇರಿ ನದಿಯ ಕಮರಿಯ ಸೇತುವೆಯ ಮೇಲೆ ಇದ್ದರು ಎಂದು ಹೇಳಲಾಗಿದೆ. ಸುಮಾರು 100 ಜನರು ನದಿ ನೀರಿನಲ್ಲಿ ಈಜಾಡಿ ಜೀವ ಉಳಿಸಿಕೊಂಡಿದ್ದರು.
2011ರ ಸೇತುವೆ ದುರಂತ: ಅಕ್ಟೋಬರ್‌ನಲ್ಲಿ ಭಾರತದ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಈಶಾನ್ಯ ಭಾರತದಲ್ಲಿ ಹಬ್ಬದ ಜನಸಂದಣಿಯಿಂದ ತುಂಬಿದ ಸೇತುವೆ ಕುಸಿದು ಕನಿಷ್ಠ 32 ಜನರು ಸಾವನ್ನಪ್ಪಿದ್ದರು. ಈ ಘಟನೆಯ ಒಂದು ವಾರದ ನಂತರ ಅರುಣಾಚಲ ಪ್ರದೇಶದಲ್ಲಿ ನದಿಯ ಮೇಲಿನ ಕಾಲುಸಂಕ ಕುಸಿದು ಸುಮಾರು 30 ಜನರು ಸಾವನ್ನಪ್ಪಿದ್ದರು.
2016ರ ಸೇತುವೆ ದುರಂತಗಳು: ಮಾರ್ಚ್‌ನಲ್ಲಿ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದ ಜನನಿಬಿಡ ರಸ್ತೆಯ ಮೇಲೆ ಫ್ಲೈಓವರ್ ಕುಸಿದು ಕನಿಷ್ಠ 26 ಜನರು ಮೃತಪಟ್ಟಿದ್ದರು. ಬೃಹತ್ ಕಾಂಕ್ರೀಟ್ ಚಪ್ಪಡಿಗಳು ಮತ್ತು ಲೋಹದ ಅಡಿಯಲ್ಲಿ ಸಿಲುಕಿದ್ದ ಸುಮಾರು 100 ಜನರನ್ನು ರಕ್ಷಣಾ ಪಡೆಗಳು ರಕ್ಷಿಸಿದ್ದರು.
2018ರ ಸೇತುವೆ ದುರಂತಗಳು: ಇಟಲಿಯ ಜಿನೋವಾ ನಗರದಲ್ಲಿ ಸೇತುವೆ ಕುಸಿದು 43 ಜನರು ಸಾವನ್ನಪ್ಪಿದ್ದರು. ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಫ್ರಾನ್ಸ್ ಮತ್ತು ಇಟಲಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ಭಾಗವಾಗಿರುವ ಮೊರಾಂಡಿ ಸೇತುವೆ ಸಹಿತ ಹತ್ತಾರು ವಾಹನಗಳು ಮತ್ತು ಅದರಲ್ಲಿದ್ದ ಪ್ರಯಾಣಿಕರು ಕೊಚ್ಚಿಹೋಗಿದ್ದರು.
2021ರ ಸೇತುವೆ ದುರಂತ: ಮೆಕ್ಸಿಕೋ ಸಿಟಿ ಮೆಟ್ರೋ ವ್ಯವಸ್ಥೆಯಲ್ಲಿನ ಎತ್ತರದ ಭಾಗವು ಮೇ ತಿಂಗಳಲ್ಲಿ ಕುಸಿದು ಪ್ರಯಾಣಿಕರ ರೈಲು ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ 26 ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು.
2022ರ ಸೇತುವೆ ದುರಂತ: ಗುಜರಾತ್‌ನ ಮೊರ್ಬಿಯಲ್ಲಿ 100 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆ ಅಕ್ಟೋಬರ್ 30ರಂದು ಕುಸಿದು 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನವೀಕರಣದ ನಂತರ ಅ.26ರಂದು ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಲಾಗಿತ್ತು. ಅದರಂತೆ ಭಾನುವಾರ ಸೇತುವೆ ಮೇಲೆ ಮಿತಿಗೂ ಮೀರಿ ಸುಮಾರು 500 ಮಂದಿ ಇದ್ದರು. ಅದರಂತೆ ಭಾರ ಹೆಚ್ಚಾಗಿ ಸೇತುವೆ ಕುಸಿದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.