
ಇಸ್ಲಾಮಾಬಾದ್, ಫೆಬ್ರವರಿ 17: ಭ್ರಷ್ಟಾಚಾರ ಆರೋಪದಲ್ಲಿ ಅಡಿಯಾಲ ಜೈಲಿನಲ್ಲಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan)ಗೆ ಸೂಕ್ತ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಪಾಕ್ ಸರ್ಕಾರಕ್ಕೆ ವಿಶ್ವ ಕ್ರಿಕೆಟ್ನ 14 ಮಾಜಿ ನಾಯಕರು ಪತ್ರ ಬರೆದಿದ್ದಾರೆ. ಇಮ್ರಾನ್ ಖಾನ್ ದೃಷ್ಟಿ ಕಳೆದುಕೊಂಡಿದ್ದು, ಸಮರ್ಪಕ ಚಿಕಿತ್ಸೆ ಒದಗಿಸುವಂತೆ ಕೋರಿ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಸೇರಿ ಕ್ರಿಕೆಟ್ ತಂಡಗಳ ಹಲವು ಮಾಜಿ ನಾಯಕರು ಪತ್ರ ಬರೆದಿದ್ದಾರೆ.
ಅಕ್ಟೋಬರ್ 2025ರವರೆಗೆ ಇಮ್ರಾನ್ ಖಾನ್ ಅವರ ಎರಡೂ ಕಣ್ಣುಗಳ ದೃಷ್ಟಿ ಸಾಮಾನ್ಯವಾಗಿತ್ತು ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಅದರ ನಂತರ ಅವರ ದೃಷ್ಟಿ ಮಸುಕಾಗುತ್ತಿದೆ. ಇಮ್ರಾನ್ ಖಾನ್ ಜೈಲು ಆಡಳಿತಕ್ಕೆ ಹಲವಾರು ಬಾರು ದೂರು ನೀಡಿದ್ದರು. ಆದರೆ ಇದ್ದಕ್ಕಿದ್ದಂತೆ ಬಲಗಣ್ಣ ದೃಷ್ಟಿ ಹೋಗುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರಜ್ಞರು ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗಿರುವುದನ್ನು ದೃಢಪಡಿಸಿದ್ದಾರೆ.ಇದರಿಂದಾಗಿ ಗಂಭೀರ ಹಾನಿಯಾಗಿದೆ. ಜನವರಿ 24ರಂದಿ ಪಿಮ್ಸ್ ಆಸ್ಪತ್ರೆಯಲ್ಲಿ ನಡೆಸಲಾದ ವೈದ್ಯಕೀಯ ವಿಧಾನಗಳ ಮರುಪರೀಕ್ಷೆ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಕ್ರಿಕೆಟ್ ತಂಡಗಳ ಮಾಜಿ ನಾಯಕರು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದು, 73 ವರ್ಷದ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಜೈಲಿನಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮತ್ತಷ್ಟು ಓದಿ: ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಸುಪ್ರೀಂಕೋರ್ಟ್ನಲ್ಲಿ ಕಣ್ಣೀರಿಟ್ಟ ಸಹೋದರಿ
ಭಾರತದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಅಲನ್ ಬಾರ್ಡರ್, ಸ್ಟೀವ್ ವಾ, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್ ಮತ್ತು ಕಿಮ್ ಹ್ಯೂಸ್ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.
ಇಂಗ್ಲೆಂಡ್‌ನ ಮೈಕ್ ಅಥರ್ಟನ್, ನಾಸರ್ ಹುಸೇನ್, ಮೈಕ್ ಬ್ರಿಯಾರ್ಲಿ ಮತ್ತು ಡೇವಿಡ್ ಗೋವರ್ ಕೂಡ ಅರ್ಜಿಗೆ ಸಹಿ ಹಾಕಿದ್ದಾರೆ, ಹಾಗೆಯೇ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ಲೈವ್ ಲಾಯ್ಡ್ ಮತ್ತು ನ್ಯೂಜಿಲೆಂಡ್‌ನ ಮಾಜಿ ನಾಯಕ ಜಾನ್ ರೈಟ್ ಕೂಡ ಅರ್ಜಿಗೆ ಸಹಿ ಹಾಕಿದ್ದಾರೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂಬ ವರದಿಗಳು ಬಂದ ನಂತರ ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಅರ್ಜಿ ಬರೆಯಲು ನಿರ್ಧರಿಸಿದ್ದರು. ಭ್ರಷ್ಟಾಚಾರ ಆರೋಪದ ಮೇಲೆ ಇಮ್ರಾನ್ ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ. ಇಮ್ರಾನ್ ಖಾನ್ ಅವರನ್ನು ನಡೆಸಿಕೊಂಡ ರೀತಿ ಬಗ್ಗೆ ಸುನಿಲ್ ಗವಾಸ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದರು. ಪರಿಸ್ಥಿತಿ ಭಯಾನಕವಾಗಿದೆ ಮತ್ತು ಅವರ ಸಂಬಂಧವು ಮೈದಾನದಲ್ಲಿನ ಪೈಪೋಟಿಯನ್ನು ಮೀರಿದ್ದು ಎಂದು ಅವರು ಹೇಳಿದರು.
ಇಮ್ರಾನ್ ಖಾನ್ 1971ರಿಂದ 1992ರವರೆಗೂ ಪಾಕ್ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ. 1987ರಲ್ಲಿ ವಿಶ್ವಕಪ್ ಅಂತ್ಯದಲ್ಲಿ ನಿವೃತ್ತಿ ಘೋಷಿಸಿದ್ದರು. 1988ರಲ್ಲಿ ಇವರನ್ನು ಮತ್ತೆ ತಂಡಕ್ಕೆ ಸೇರಲು ಕರೆತರಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Tue, 17 February 26