ವಿದ್ಯಾಭ್ಯಾಸ ಮುಗಿದರೂ ಸಿಗದ ಕೆಲಸ, ಸಾಲಬಾಧೆ, ಅಮೆರಿಕದಲ್ಲಿ ಭಾರತೀಯ ಯುವಕ ಆತ್ಮಹತ್ಯೆ

ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿದರೂ ಉದ್ಯೋಗ ಸಿಗದೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಭಾರತೀಯ ಯುವಕ ಇರಗನಬೋಯಿನ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದ ಸಾಲದ ಹೊರೆ ಮತ್ತು ನಿರಂತರ ಒತ್ತಡವೇ ಈ ದುರಂತಕ್ಕೆ ಕಾರಣ. ಚಂದು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಅಮೆರಿಕದ ಭಾರತೀಯ ಸಮುದಾಯ ನಿಧಿಸಂಗ್ರಹಣೆ ನಡೆಸಿದ್ದು, ಸರ್ಕಾರದಿಂದಲೂ ನೆರವು ದೊರೆತಿದೆ.

ವಿದ್ಯಾಭ್ಯಾಸ ಮುಗಿದರೂ ಸಿಗದ ಕೆಲಸ, ಸಾಲಬಾಧೆ,  ಅಮೆರಿಕದಲ್ಲಿ ಭಾರತೀಯ ಯುವಕ ಆತ್ಮಹತ್ಯೆ
ಮೃತ ಯುವಕ ಚಂದು
Image Credit source: NDTV

Updated on: May 01, 2026 | 1:36 PM

ಕರ್ನೂಲ್, ಮೇ 1: ದೊಡ್ಡ ದೊಡ್ಡ ಕನಸ್ಸುಗಳನ್ನು ಹೊತ್ತು ಅಮೆರಿಕ(America)ಕ್ಕೆ ಓದಲು ಹೋಗಿದ್ದ ಭಾರತೀಯ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 26 ವರ್ಷದ  ಚಂದು ಮೃತ ಯುವಕ. ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ  ಅರಸುತ್ತಿದ್ದ ಯುವಕನ ಅಕಾಲಿಕ ಸಾವು ಆತನ ಕುಟುಂಬವನ್ನು ಅಕ್ಷರಶಃ ಬೀದಿಗೆ ತಳ್ಳಿದೆ. ಚಂದು ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಿಂದ ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಕಳೆದ ಹಲವು ವಾರಗಳಿಂದ ಉದ್ಯೋಗ ಹುಡುಕುತ್ತಿದ್ದರೂ ಸಿಕ್ಕಿರಲಿಲ್ಲ.

ಕರ್ನೂಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಅವರ ತಂದೆ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಮತ್ತು ಕುಟುಂಬವು ಹೊಂದಿದ್ದ ಸಾಲದ ಹೊರೆಯು ಚಂದು ಅವರ ಮೇಲೆ ತೀವ್ರ ಭಾವನಾತ್ಮಕ ಒತ್ತಡ ಹೇರಿತ್ತು. ಈ ನಿರಂತರ ಒತ್ತಡ ತಾಳಲಾರದೆ ಅವರು ಅಮೆರಿಕದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು 20 ಲಕ್ಷ ರೂ. ವೆಚ್ಚವಾಗಲಿದ್ದು, ಬಡ ಕುಟುಂಬಕ್ಕೆ ಇದನ್ನು ಭರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಹಣವನ್ನು ಸಂಗ್ರಹಿಸುವ ಗುರಿಯೊಂದಿಗೆ ನಿಧಿಸಂಗ್ರಹಣೆಯನ್ನು ಪ್ರಾರಂಭಿಸಿದೆ. ಕಳೆದ ಎರಡು ದಿನಗಳಲ್ಲಿ ಈಗಾಗಲೇ 76,000 ಡಾಲರ್​ಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಇದರಲ್ಲಿ ಚಂದು ಅವರ ಕುಟುಂಬ ಮಾಡಿರುವ ಸಾಲವನ್ನು ತೀರಿಸಲು 25,000 ಡಾಲರ್​ ಹಣವನ್ನು ಅವರ ಹೆತ್ತವರಿಗೆ ನೀಡಲು ನಿರ್ಧರಿಸಲಾಗಿದೆ.

ಮತ್ತಷ್ಟು ಓದಿ: ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ತಲೆದಂಡ

ಈ ಘಟನೆಯ ಕುರಿತು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಸಂತಾಪ ಸೂಚಿಸಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರ ಸಹಾಯ ಕೋರಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸಚಿವ ರಾಮ್ ಮೋಹನ್ ನಾಯ್ಡು ಅವರು, ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಮುದಾಯದ ಸದಸ್ಯರ ಪ್ರಕಾರ, ಚಂದು ಕೇವಲ ಒಬ್ಬ ವಿದ್ಯಾರ್ಥಿಯಲ್ಲದೆ ತನ್ನ ಕಿರಿಯ ಸಹೋದರ ಮತ್ತು ಸ್ನೇಹಿತರಿಗೆ ಆಧಾರಸ್ತಂಭವಾಗಿದ್ದರು. ಆದರೆ ವಿಧಿಯಾಟದಿಂದ ಆತನ ಬದುಕಿನ ಮಹತ್ವಾಕಾಂಕ್ಷೆಗಳು ಅರ್ಧಕ್ಕೇ ಮೊಟಕುಗೊಂಡಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us