ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸಂಪರ್ಕಿಸುವುದು ತೀರಾ ಕಷ್ಟ: ಇರಾನ್ ಅಧ್ಯಕ್ಷ

ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸಂಪರ್ಕಿಸುವುದು ಕಷ್ಟಕರ ಎಂದು ಅಧ್ಯಕ್ಷ ಪೆಜೆಶ್ಕಿಯಾನ್ ಬಹಿರಂಗಪಡಿಸಿದ್ದಾರೆ. ಮಾಜಿ ಲೀಡರ್ ಹತ್ಯೆ ಬಳಿಕ ಕಾಣಿಸದ ಮೊಜ್ತಬಾ, ಐಆರ್‌ಜಿಸಿ ಮೂಲಕ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದು ಇರಾನ್‌ನಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದ್ದು, ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿದೆ. ವಿದೇಶಾಂಗ ನೀತಿ ಮತ್ತು ಅಂತರಾಷ್ಟ್ರೀಯ ಮಾತುಕತೆಗಳ ಮೇಲೆ ಇದರ ಪರಿಣಾಮ ಉಂಟಾಗಿದೆ.

ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸಂಪರ್ಕಿಸುವುದು ತೀರಾ ಕಷ್ಟ: ಇರಾನ್ ಅಧ್ಯಕ್ಷ
ಮೊಜ್ತಬಾ

Updated on: Aug 06, 2026 | 10:00 AM

ಟೆಹ್ರಾನ್, ಆಗಸ್ಟ್​ 06 ಇರಾನ್ ರಾಜಕೀಯ ಮತ್ತು ಮಿಲಿಟರಿ ವಲಯದಲ್ಲಿ ಭಾರಿ ಬಿಕ್ಕಟ್ಟು ಎದುರಾಗಿರುವ ವರದಿಗಳ ನಡುವೆಯೇ, ದೇಶದ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ(Mojtaba Khamenei) ಅವರೊಂದಿಗೆ ಸಂವಹನ ನಡೆಸುವುದು ಈ ಪರಿಸ್ಥಿತಿಯಲ್ಲಿ ತೀರಾ ಕಷ್ಟಕರವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಬಹಿರಂಗಪಡಿಸಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ವಾಯುದಾಳಿಯಲ್ಲಿ ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದರು. ಆ ದಾಳಿಯಲ್ಲಿ ಗಾಯಗೊಂಡಿದ್ದ ಮೊಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.

ಮೊಜ್ತಬಾ ಖಮೇನಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ. ಕೇವಲ ಲಿಖಿತ ಪ್ರಕಟಣೆಗಳ ಮೂಲಕವೇ ಆದೇಶ ಹೊರಡಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಅಧ್ಯಕ್ಷ ಪೆಜೆಶ್ಕಿಯಾನ್, ಅವರನ್ನು ಸಂಪರ್ಕಿಸುವುದು ಸದ್ಯಕ್ಕೆ ಸವಾಲಾಗಿದೆ. ಆದರೆ ಅವರು ನಮ್ಮೊಂದಿಗಿದ್ದಾರೆ ಎಂಬ ಭಾವನೆಯೇ ನಮಗೆ ಮುಂದೆ ಸಾಗಲು ಬಲ ನೀಡುತ್ತದೆ. ದುರುದ್ದೇಶಪೂರಿತ ವ್ಯಕ್ತಿಗಳು ಸುಪ್ರೀಂ ಲೀಡರ್ ಕುರಿತು ಇಲ್ಲಸಲ್ಲದ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಭಿನ್ನಾಭಿಪ್ರಾಯದ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.

ಮೊಜ್ತಬಾ ಖಮೇನಿ ಅವರು ಇರಾನ್‌ ಅಧ್ಯಕ್ಷರಿಗಿಂತ ಹೆಚ್ಚಾಗಿ ಮಿಲಿಟರಿ ಶಕ್ತಿ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಕಮಾಂಡರ್ ಅಹ್ಮದ್ ವಾಹಿದಿ ಅವರಿಗೆ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದ್ದಾರೆ. ವಿದೇಶಾಂಗ ನೀತಿ ಮತ್ತು ಯುದ್ಧದ ತಂತ್ರಗಳಲ್ಲಿ ತಮ್ಮ ಆಡಳಿತವನ್ನು ಸಂಪೂರ್ಣವಾಗಿ ಬದಿಗಿಡಲಾಗುತ್ತಿದೆ ಎಂದು ಆಕ್ರೋಶಗೊಂಡಿದ್ದ ಪೆಜೆಶ್ಕಿಯಾನ್, ಈಗಾಗಲೇ ಮೇ ತಿಂಗಳಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು.

ಮತ್ತಷ್ಟು ಓದಿ: ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಮೇಲೆ 2 ಬಾರಿ ಮಾರಣಾಂತಿಕ ದಾಳಿ; ಇರಾನ್ ಸಂಸದ ಮಾಹಿತಿ

ಇರಾನ್‌ನಲ್ಲಿ ಸುಪ್ರೀಂ ಲೀಡರ್ ಹುದ್ದೆಯು ದೇಶದ ಅತ್ಯುನ್ನತ ಸರ್ವಾಧಿಕಾರಿ ಅಧಿಕಾರ ಹೊಂದಿದ್ದು, ರಾಜಕೀಯ ಅಧ್ಯಕ್ಷರಿಗಿಂತ ಸಶಸ್ತ್ರ ಪಡೆಗಳು (IRGC) ಹೇಳಿದಂತೆ ಕೇಳುವ ವಾತಾವರಣ ಸೃಷ್ಟಿಯಾಗಿದೆ. ಇರಾನ್‌ನ ಪ್ರಮುಖ ಆಂತರಿಕ ಮತ್ತು ಮಿಲಿಟರಿ ನಿರ್ಧಾರಗಳನ್ನು ತಳೆಯುವಲ್ಲಿ ಪೆಜೆಶ್ಕಿಯಾನ್ ನೇತೃತ್ವದ ನಾಗರಿಕ ಸರ್ಕಾರಕ್ಕೆ ಯಾವುದೇ ಪ್ರಭಾವ ಇಲ್ಲದಿರುವುದು, ಅಮೆರಿಕ-ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳನ್ನು ಮತ್ತಷ್ಟು ಜಟಿಲಗೊಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us