
ಟೆಹ್ರಾನ್, ಜೂನ್ 19: ವಿಶ್ವ ರಾಜಕಾರಣದಲ್ಲಿ ಭಾರಿ ತಿರುವು ಸಿಕ್ಕಿದೆ. ಇರಾನ್(Iran) ಮತ್ತು ಅಮೆರಿಕ ಜಂಟಿಯಾಗಿ ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅಧಿಕೃತವಾಗಿ ದೃಢಪಡಿಸಿದ್ದಾರೆ. ಆದರೆ, ಈ ಒಪ್ಪಂದಕ್ಕೆ ಇರಾನ್‌ನ ಉತ್ಸಾಹ ಕಾರಣವಲ್ಲ, ಬದಲಿಗೆ ಯುದ್ಧ ಮುಗಿಸಲೇಬೇಕಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತಾಶೆಯೇ ಕಾರಣ ಎಂದು ಖಮೇನಿ ಲೇವಡಿ ಮಾಡಿದ್ದಾರೆ.
ವರ್ಸೈಲ್ಸ್ ಅರಮನೆಯಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದ ಜಿ7 ಶೃಂಗಸಭೆಯ ಔತಣಕೂಟದ ವೇಳೆ ಈ ಒಪ್ಪಂದದ ಸಿದ್ಧತೆ ನಡೆದಿದ್ದು, ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಇದಕ್ಕೆ ಔಪಚಾರಿಕವಾಗಿ ಸಹಿ ಬೀಳಲಿದೆ.
ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಹಾಗೂ ಯುದ್ಧವನ್ನು ತಕ್ಷಣದಿಂದಲೇ ಶಾಶ್ವತವಾಗಿ ನಿಲ್ಲಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಅಮೆರಿಕವು ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು 30 ದಿನಗಳ ಒಳಗಾಗಿ ಹಿಂಪಡೆಯಬೇಕಾಗುತ್ತದೆ. ಇದರಿಂದ ಜಾಗತಿಕ ಹಡಗು ಸಂಚಾರ ಮೊದಲಿನ ಸ್ಥಿತಿಗೆ ಮರಳಲಿದೆ.
ಮತ್ತಷ್ಟು ಓದಿ: ಇರಾನ್-ಅಮೆರಿಕ ಐತಿಹಾಸಿಕ ಒಪ್ಪಂದ: ಜಾಗತಿಕ ತೈಲ ಬೆಲೆ ಕುಸಿತ
ಅಂತಿಮ ಒಪ್ಪಂದವಾದ 30 ದಿನಗಳಲ್ಲಿ ಇರಾನ್ ಸುತ್ತಮುತ್ತಲಿನ ಪ್ರದೇಶಗಳಿಂದ ಅಮೆರಿಕ ತನ್ನ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದೆ.ಇರಾನ್ ತನ್ನ ವ್ಯಾಪ್ತಿಯಲ್ಲಿ ಬರುವ ಹಾರ್ಮುಜ್ ಜಲಸಂಧಿಯಲ್ಲಿ ಮುಂದಿನ 60 ದಿನಗಳವರೆಗೆ ಯಾವುದೇ ಶುಲ್ಕವಿಲ್ಲದೆ ಅಂತಾರಾಷ್ಟ್ರೀಯ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಭರವಸೆ ನೀಡಿದೆ.
ಸದ್ಯಕ್ಕೆ ಇದು ಮಧ್ಯಂತರ ಒಪ್ಪಂದವಾಗಿದ್ದು, ಪೂರ್ಣ ಪ್ರಮಾಣದ ಸಮಗ್ರ ಅಂತಿಮ ಒಪ್ಪಂದವನ್ನು ಸಿದ್ಧಪಡಿಸಲು ಉಭಯ ದೇಶಗಳಿಗೆ 60 ದಿನಗಳ ಕಾಲಾವಕಾಶ ಸಿಕ್ಕಿದೆ. ಈ ಒಪ್ಪಂದವನ್ನು ಜಗತ್ತಿಗೆ ಪ್ರಕಟಿಸಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್,ಇದು ವಿಶ್ವದಲ್ಲಿ ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಲಿದ್ದು, ಜಾಗತಿಕ ವ್ಯಾಪಾರಕ್ಕೆ ದೊಡ್ಡ ನಿರಾಳ ತರಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ