ಇರಾನ್​ ರಾಜಧಾನಿ ಮೇಲೆ ಇಸ್ರೇಲ್ ವಾಯುದಾಳಿ: ತೈಲ ಡಿಪೋಗಳು ಸ್ಫೋಟ, ಬಾನೆತ್ತರಕ್ಕೆ ಚಿಮ್ಮಿದ ಬೆಂಕಿ

ಇಸ್ರೇಲ್-ಇರಾನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದಿದೆ. ಇಸ್ರೇಲ್‌ನ ಯುದ್ಧವಿಮಾನಗಳು ಟೆಹ್ರಾನ್‌ನ ಪ್ರಮುಖ ತೈಲ ಡಿಪೋಗಳ ಮೇಲೆ ಭೀಕರ ದಾಳಿ ನಡೆಸಿವೆ, ಇಡೀ ಪ್ರದೇಶ 'ಬೆಂಕಿಯ ನದಿ'ಯಂತೆ ಆಗಿದೆ. ಈ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇರಾನ್‌ನಲ್ಲಿ ಒಟ್ಟಾರೆ ಸಾವು-ನೋವು ಹೆಚ್ಚಾಗಿದೆ. ಇಸ್ರೇಲ್ ಮುಂದಿನ ಸುಪ್ರೀಂ ಲೀಡರ್ ಆಯ್ಕೆಯಲ್ಲಿ ಭಾಗವಹಿಸುವವರಿಗೆ ಎಚ್ಚರಿಕೆ ನೀಡಿದ್ದು, ಇರಾನ್ ಆಧುನಿಕ ಕ್ಷಿಪಣಿಗಳನ್ನು ಬಳಸುವ ಬೆದರಿಕೆ ಹಾಕಿದೆ.

ಇರಾನ್​ ರಾಜಧಾನಿ ಮೇಲೆ ಇಸ್ರೇಲ್ ವಾಯುದಾಳಿ: ತೈಲ ಡಿಪೋಗಳು ಸ್ಫೋಟ, ಬಾನೆತ್ತರಕ್ಕೆ ಚಿಮ್ಮಿದ ಬೆಂಕಿ
ವಿಡಿಯೋ

Updated on: Mar 08, 2026 | 8:00 PM

ಟೆಹ್ರಾನ್, ಮಾ.8: ಇಸ್ರೇಲ್ ಮತ್ತು ಇರಾನ್ ನಡುವಿನ ಮಹಾಯುದ್ಧವು ಸ್ಫೋಟಕ ರೂಪ ಪಡೆದಿದೆ. ಶನಿವಾರ ರಾತ್ರಿ ಇಸ್ರೇಲ್ ಯುದ್ಧವಿಮಾನಗಳು ಟೆಹ್ರಾನ್‌ನ ಐದು ಪ್ರಮುಖ ತೈಲ ಡಿಪೋಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭೀಕರ ದಾಳಿಯಿಂದಾಗಿ ಇಡೀ ನಗರವು ಸ್ಫೋಟ ಮತ್ತು ದಟ್ಟವಾದ ಹೊಗೆಯಿಂದ ಆವೃತವಾಗಿದೆ. ತೈಲ ಟ್ಯಾಂಕರ್‌ಗಳಿಂದ ಸೋರಿಕೆಯಾದ ಇಂಧನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ರಸ್ತೆಗಳಲ್ಲಿ “ಬೆಂಕಿಯ ನದಿ” ಹರಿಯುತ್ತಿರುವಂತೆ ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಶಹ್ರಾನ್ ಮತ್ತು ಅಘದಾಸಿಯಾದಂತಹ ಪ್ರಮುಖ ಡಿಪೋಗಳು ಧಗಧಗಿಸಿ ಉರಿಯುತ್ತಿವೆ.

ತೈಲ ಮತ್ತು ಹೊಗೆಯ ಮಿಶ್ರಣದಿಂದಾಗಿ ಟೆಹ್ರಾನ್‌ನಲ್ಲಿ ‘ಕಪ್ಪು ಮಳೆ’ಯಂತೆ ಸುರಿದಿದೆ ಎಂದು ವರದಿಯಾಗಿದೆ. ಸುಟ್ಟ ಇಂಧನದ ವಾಸನೆ ಇಡೀ ನಗರವನ್ನು ಆವರಿಸಿದೆ.ದಾಳಿಯಲ್ಲಿ ಇಬ್ಬರು ಟ್ಯಾಂಕರ್ ಚಾಲಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಫೆಬ್ರವರಿ 28 ರಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಈವರೆಗೆ ಇರಾನ್‌ನಲ್ಲಿ ಸುಮಾರು 1,200 ನಾಗರಿಕರು ಮೃತಪಟ್ಟಿದ್ದು, 10,000 ಜನರು ಗಾಯಗೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆದಿದ್ದು, ಇರಾನ್‌ನ ಸುಮಾರು 16 ಮಿಲಿಟರಿ ವಿಮಾನಗಳು ಹಾನಿಗೊಳಗಾಗಿವೆ. ಇಸ್ರೇಲ್ ತನ್ನ ಪರ್ಷಿಯನ್ ಭಾಷೆಯ ಸಾಮಾಜಿಕ ಜಾಲತಾಣದ ಮೂಲಕ ಇರಾನ್‌ನ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ (Assembly of Experts) ಗೆ ನೇರ ಎಚ್ಚರಿಕೆ ನೀಡಿದೆ. “ಮುಂದಿನ ಸುಪ್ರೀಂ ಲೀಡರ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರನ್ನು ನಾವು ಗುರಿಯಾಗಿಸಿಕೊಳ್ಳುತ್ತೇವೆ, ಇದು ನಿಮಗೆ ಎಚ್ಚರಿಕೆ” ಎಂದು ಇಸ್ರೇಲ್ ಗುಡುಗಿದೆ.

ಇದನ್ನೂ ಓದಿ: “ಸರ್ವೋಚ್ಚ ನಾಯಕ ಯಾರೇ ಆಗಲಿ ಜೀವಂತ ಬಿಡುವುದಿಲ್ಲ” : ಇರಾನ್​​​ಗೆ ಎಚ್ಚರಿಕೆ ನೀಡಿದ ಇಸ್ರೇಲ್

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಈ ಯುದ್ಧವನ್ನು ಕನಿಷ್ಠ 6 ತಿಂಗಳ ಕಾಲ ಮುಂದುವರಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಈವರೆಗೆ ನಾವು ಹಳೆಯ ಕ್ಷಿಪಣಿಗಳನ್ನು ಮಾತ್ರ ಬಳಸಿದ್ದೇವೆ, ಮುಂದಿನ ದಿನಗಳಲ್ಲಿ ‘ಅತ್ಯಾಧುನಿಕ ಲಾಂಗ್ ರೇಂಜ್’ ಕ್ಷಿಪಣಿಗಳನ್ನು ಬಳಸುವುದಾಗಿ ಇರಾನ್ ಎಚ್ಚರಿಸಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us