ಜಪಾನ್​​ನಲ್ಲಿ ಮಸೀದಿ ನಿರ್ಮಿಸಿದ ಪಾಕಿಸ್ತಾನ, ಇದು ಕಾನೂನು ಬಾಹಿರ ಎಂದ ದೇಶ

ಜಪಾನ್‌ನ ಕವಾಗೋದಲ್ಲಿ ಪಾಕಿಸ್ತಾನಿಗಳು ನಿರ್ಮಿಸಿದ ಮಸೀದಿಯು ಸ್ಥಳೀಯ ನಗರಾಭಿವೃದ್ಧಿ ನಿಯಮಗಳನ್ನು ಉಲ್ಲಂಘಿಸಿದೆ. ಜಪಾನ್ ಅಧಿಕಾರಿಗಳು ಇದನ್ನು ಕಾನೂನು ಬಾಹಿರ ಎಂದು ಪರಿಗಣಿಸಿದ್ದಾರೆ. ಟೋಕಿಯೊದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಈ ಯೋಜನೆಯಿಂದ ದೂರ ಉಳಿದು, ತನ್ನ ಪ್ರಜೆಗಳು ಜಪಾನ್ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಕಾನೂನು ಉಲ್ಲಂಘನೆಗಳ ಬಗ್ಗೆ ಪಾಕಿಸ್ತಾನಿ ಸಮುದಾಯಕ್ಕೆ ಎಚ್ಚರಿಕೆ ನೀಡಲಾಗಿದೆ.

ಜಪಾನ್​​ನಲ್ಲಿ ಮಸೀದಿ ನಿರ್ಮಿಸಿದ ಪಾಕಿಸ್ತಾನ, ಇದು ಕಾನೂನು ಬಾಹಿರ ಎಂದ ದೇಶ
ಮಸೀದಿ
Image Credit source: NDTV

Updated on: Jun 03, 2026 | 7:52 AM

ಟೋಕಿಯೊ, ಜೂನ್ 03: ಜಪಾನ್​ನ ಸೈತಾಮಾ ಪ್ರಾಂತ್ಯದ ಕವಾಗೋ ನಗರದಲ್ಲಿ ಪಾಕಿಸ್ತಾನ(Pakistan) ಮಸೀದಿ ನಿರ್ಮಿಸಿದೆ. ಸ್ಥಳೀಯ ನಗರಾಭಿವೃದ್ಧಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಕಿಯೊದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಕವಾಗೋ ಮಸೀದಿ ಯೋಜನೆಯಿಂದ ಅಧಿಕೃತವಾಗಿ ದೂರ ಉಳಿದಿದ್ದು, ಜಪಾನ್‌ನಲ್ಲಿರುವ ತನ್ನ ದೇಶದ ನಾಗರಿಕರು ಸ್ಥಳೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

ಘಟನೆ ಹಿನ್ನೆಲೆ ಏನು?
ಕವಾಗೋದಲ್ಲಿರುವ ಈ ಮಸೀದಿಯನ್ನು 4,500 ಚದರ ಮೀಟರ್‌ನ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದು ‘ನಗರೀಕರಣ ನಿಯಂತ್ರಣ ಪ್ರದೇಶ’ದೊಳಗೆ ಬರುವುದರಿಂದ, ಸ್ಥಳೀಯ ಪುರಸಭೆಯ ವಿಶೇಷ ಅನುಮತಿ ಇಲ್ಲದೆ ಇಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಕವಾಗೋ ನಗರ ಅಧಿಕಾರಿಗಳ ಪ್ರಕಾರ, ಈ ಮಸೀದಿಯನ್ನು ಅಗತ್ಯ ಅನುಮತಿಗಳನ್ನು ಪಡೆಯದೆಯೇ ನಿರ್ಮಿಸಲಾಗಿದೆ.

ರಾಯಭಾರ ಕಚೇರಿ ನೀಡಿದ ಸ್ಪಷ್ಟನೆ
ಈ ವರ್ಷದ ಏಪ್ರಿಲ್ 3 ರಂದು ನಡೆದ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಜಪಾನ್‌ಗೆ ಪಾಕಿಸ್ತಾನದ ರಾಯಭಾರಿಯಾದ ಅಬ್ದುಲ್ ಹಮೀದ್ ಭಾಗವಹಿಸಿದ್ದರು. ಅಗತ್ಯವಿರುವ ಎಲ್ಲಾ ಸರ್ಕಾರಿ ಪರವಾನಗಿಗಳನ್ನು ಪಡೆಯಲಾಗಿದೆ ಎಂದು ಸಂಘಟಕರು ಭರವಸೆ ನೀಡಿದ ಕಾರಣಕ್ಕಾಗಿಯೇ ರಾಯಭಾರಿ ಉದ್ಘಾಟನೆಗೆ ಹೋಗಿದ್ದರು. ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವ ಯಾವುದೇ ಯೋಜನೆಗಳನ್ನು ರಾಯಭಾರ ಕಚೇರಿ ಬೆಂಬಲಿಸುವುದಿಲ್ಲ.

ಮತ್ತಷ್ಟು ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಜಪಾನ್‌ನಲ್ಲಿ ವಾಸಿಸುವ ಪಾಕಿಸ್ತಾನಿ ಸಮುದಾಯವು ಮಸೀದಿ ನಿರ್ಮಾಣ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಜಪಾನಿನ ಕಾನೂನುಗಳನ್ನು ಸಂಪೂರ್ಣವಾಗಿ ಗೌರವಿಸಬೇಕು. ಅಗತ್ಯ ಪರವಾನಗಿ ಇಲ್ಲದೆ ಯಾವುದೇ ನಿರ್ಮಾಣ ಮಾಡಬಾರದು ಮತ್ತು ಜಪಾನ್ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು.

ಜಪಾನ್‌ನಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಯಾಶಿಯೋ ಮಸೀದಿಯ ಪ್ರತಿನಿಧಿ ಶಕೀಲ್ ಶೇಖ್ ಮೊಹಮ್ಮದ್ ಕೂಡ ಕವಾಗೋ ಯೋಜನೆಯನ್ನು ಟೀಕಿಸಿದ್ದಾರೆ. ಸ್ಥಳೀಯ ನಿಯಮಗಳನ್ನು ಪಾಲಿಸಿ, ಅಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದರಿಂದ ಮಾತ್ರ ಪೂಜಾ ಸ್ಥಳಗಳಿಗೆ ಗೌರವ ಸಿಗುತ್ತದೆ, ಎಂದು ಅವರು ಹೇಳಿದ್ದಾರೆ. 2000 ಇಸವಿಯಿಂದ ಜಪಾನ್‌ನಲ್ಲಿರುವ ಯಾಶಿಯೋ ಮಸೀದಿಯು ಸ್ಥಳೀಯ ನೆರೆಹೊರೆಯವರೊಂದಿಗೆ ಹಬ್ಬಗಳನ್ನು ಆಚರಿಸುತ್ತಾ, ಸ್ವಚ್ಛತಾ ಆಂದೋಲನಗಳಲ್ಲಿ ಭಾಗವಹಿಸುತ್ತಾ ಜಪಾನಿ ಸಮಾಜದೊಂದಿಗೆ ಅತ್ಯುತ್ತಮ ಸೌಹಾರ್ದಯುತ ಸಂಬಂಧವನ್ನು ಹೊಂದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us