
ಜೋರ್ಡಾನ್, ಅಕ್ಟೋಬರ್ 24: ದಕ್ಷಿಣ ಜೋರ್ಡಾನ್‌ನ ಕರಕ್ ಪ್ರಾಂತ್ಯದ ಹಮ್ಮೌದ್ ಗ್ರಾಮದಲ್ಲಿರುವ ಗ್ರೀಕ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಬಂದೂಕುಧಾರಿಗಳು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ. ರಾಜಧಾನಿ ಅಮ್ಮನ್‌ನಿಂದ ದಕ್ಷಿಣಕ್ಕೆ ಸುಮಾರು 180 ಕಿಲೋಮೀಟರ್ ದೂರದಲ್ಲಿರುವ ಈ ಕ್ರಿಶ್ಚಿಯನ್ ಬಹುಸಂಖ್ಯಾತ ಪ್ರದೇಶದಲ್ಲಿ ಶುಕ್ರವಾರ ಈ ದುರಂತ ಸಂಭವಿಸಿದೆ.
ಅಂತ್ಯಕ್ರಿಯೆಯ ಪ್ರಾರ್ಥನೆಗಳು ಆರಂಭವಾದ ಕೇವಲ 15 ನಿಮಿಷಗಳಲ್ಲಿ ಅಪರಿಚಿತ ದಾಳಿಕೋರರು ಚರ್ಚ್‌ಗೆ ನುಗ್ಗಿ ಅಲ್ಲಿದ್ದ ಜನರ ಮೇಲೆ ನಿರಂತರವಾಗಿ ಗುಂಡಿನ ಮಳೆಗರೆದಿದ್ದಾರೆ. ದಾಳಿಯ ನಂತರ ಚರ್ಚ್‌ನ ನೆಲದ ಮೇಲೆ ರಕ್ತದ ಮಡುವು ಹರಿದಿದ್ದು, ಗಾಜುಗಳು ಪುಡಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಸಿಸಿಟಿವಿ ದೃಶ್ಯಾವಳಿ: ಜೋರ್ಡಾನ್ ಸರ್ಕಾರಿ ದೂರದರ್ಶನ ಪ್ರಸಾರ ಮಾಡಿದ ಸಿಸಿಟಿವಿ ದೃಶ್ಯಗಳ ಪ್ರಕಾರ, ಪಿಸ್ತೂಲುಗಳನ್ನು ಹಿಡಿದ ಇಬ್ಬರು ಬಂದೂಕುಧಾರಿಗಳು ಮೊದಲು ಚರ್ಚ್‌ನ ಕಾಂಪೌಂಡ್ ಪ್ರವೇಶಿಸಿದ್ದಾರೆ. ನಂತರ ಸೆಮಿಆಟೋಮ್ಯಾಟಿಕ್ ರೈಫಲ್ (AK-47 ಮಾದರಿ) ಹಿಡಿದ ಮೂರನೇ ವ್ಯಕ್ತಿ ಅವರೊಂದಿಗೆ ಸೇರಿಕೊಂಡು ಚರ್ಚ್ ಕಟ್ಟಡದ ಕಡೆಗೆ ನುಗ್ಗಿ ಗುಂಡು ಹಾರಿಸಿದ್ದಾರೆ.
ಚರ್ಚ್ ಒಳಗೆ ನೂಕುನುಗ್ಗಲು: ದಾಳಿ ನಡೆದ ಸಂದರ್ಭದಲ್ಲಿ ಚರ್ಚ್‌ನಲ್ಲಿ ಸುಮಾರು 150 ರಿಂದ 200 ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಹಠಾತ್ ಗುಂಡಿನ ಚಕಮಕಿ ಆರಂಭವಾಗುತ್ತಿದ್ದಂತೆ ಜನರು ಜೀವಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ 40 ಮಂದಿಯಲ್ಲಿ ಇಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಮೃತರ ಮತ್ತು ಗಾಯಾಳುಗಳ ಪೈಕಿ ಹೆಚ್ಚಿನವರು 50 ರಿಂದ 70 ವರ್ಷದೊಳಗಿನವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
3 ದಿನಗಳ ರಾಷ್ಟ್ರೀಯ ಶೋಕಾಚರಣೆ: ಈ ಹೇಯ ಕೃತ್ಯದ ಬೆನ್ನಲ್ಲೇ ಜೋರ್ಡಾನ್ ಸರ್ಕಾರವು ದೇಶಾದ್ಯಂತ 3 ದಿನಗಳ ಅಧಿಕೃತ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
ಇದನ್ನೂ ಓದಿ: ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಬಳಿಕ ಭಾರೀ ಭದ್ರತೆಯಲ್ಲಿ ಮನೆಯಿಂದ ಹೊರಬಂದ ಸಲ್ಮಾನ್ ಖಾನ್
ಜೋರ್ಡಾನ್‌ನ ರಾಜ ಅಬ್ದುಲ್ಲಾ II ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಾಪ ಸೂಚಿಸಿದ್ದು, “ಕರಕ್ ಮೇಲೆ ನಡೆದ ಈ ಭಯೋತ್ಪಾದಕ ದಾಳಿಯನ್ನು ಅತ್ಯಂತ ಕಠಿಣ ಶಿಕ್ಷೆಯೊಂದಿಗೆ ಎದುರಿಸಲಾಗುವುದು. ನಮ್ಮ ದೇಶದ ಶಾಂತಿ ಮತ್ತು ಏಕತೆಗೆ ಧಕ್ಕೆ ತರಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಗುಡುಗಿದ್ದಾರೆ.
ಉಗ್ರ ಸಿದ್ಧಾಂತದ ಕೃತ್ಯ ಎಂದ ಪ್ರಧಾನಿ: ಕರಕ್‌ನಲ್ಲಿ ತುರ್ತು ಭದ್ರತಾ ಸಭೆ ನಡೆಸಿದ ಜೋರ್ಡಾನ್ ಪ್ರಧಾನಿ ಜಾಫರ್ ಹಸನ್, ಈ ದಾಳಿಯು ಕುರುಡು ಉಗ್ರವಾದದ ಪರಿಣಾಮವಾಗಿದ್ದು, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆ ಮತ್ತು ಜಾಗತಿಕ ಆಕ್ರೋಶ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ದಾಳಿಯನ್ನು “ಅತ್ಯಂತ ಹೇಯ ಕೃತ್ಯ” ಎಂದು ಬಣ್ಣಿಸಿದ್ದು, ದಾಳಿಕೋರರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ. ಇರಾಕ್, ಈಜಿಪ್ಟ್, ಲೆಬನಾನ್, ಸಿರಿಯಾ ಹಾಗೂ ಪ್ರಸಿದ್ಧ ಇಸ್ಲಾಮಿಕ್ ಸಂಸ್ಥೆ ‘ಅಲ್-ಅಝರ್’ ಈ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿವೆ.
ಕರಕ್ ಪ್ರಾಂತ್ಯದ ಇತಿಹಾಸ: ಜೋರ್ಡಾನ್‌ನಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರೂ, ಕರಕ್ ನಗರವು ಪ್ರಾಚೀನ ಕಾಲದಿಂದಲೂ ಗಣನೀಯ ಸಂಖ್ಯೆಯ ಅರಬ್ ಕ್ರಿಶ್ಚಿಯನ್ ಸಮುದಾಯಕ್ಕೆ ನೆಲೆಯಾಗಿದೆ. ಈ ಹಿಂದೆ 2016 ರಲ್ಲಿ ಐಸಿಸ್ (ISIS) ಉಗ್ರರು ಇದೇ ಕರಕ್‌ನ ಪ್ರಸಿದ್ಧ ಪ್ರವಾಸಿ ಕೋಟೆಯ ಬಳಿ ಪೊಲೀಸರ ಮೇಲೆ ದಾಳಿ ನಡೆಸಿ 10 ಕ್ಕೂ ಹೆಚ್ಚು ಜನರನ್ನು ಕೊಂದಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ