ಮದುವೆ ಮನೆಗೆ ಸೂತಕ ತಂದ ದಾಳಿಕೋರ: ಆತ್ಮಾಹುತಿ ಬಾಂಬ್ ದಾಳಿಗೆ 7 ಜನ ಸಾವು

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದುರಂತದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸರ್ಕಾರದ ಪರ ಶಾಂತಿ ಸಮಿತಿ ನಾಯಕ ನೂರ್ ಆಲಂ ಮೆಹ್ಸೂದ್ ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದ್ದು, TTP ಕೈವಾಡ ಶಂಕೆ ವ್ಯಕ್ತವಾಗಿದೆ.

ಮದುವೆ ಮನೆಗೆ ಸೂತಕ ತಂದ ದಾಳಿಕೋರ: ಆತ್ಮಾಹುತಿ ಬಾಂಬ್ ದಾಳಿಗೆ 7 ಜನ ಸಾವು
ಬಾಂಬ್​​​​​​ ಸ್ಫೋಟ

Updated on: Jan 24, 2026 | 11:29 AM

ಪಾಕಿಸ್ತಾನ , ಜ.24: ಪಾಕಿಸ್ತಾನದ (Pakistan) ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದ ವಿವಾಹ ಸಂಭ್ರಮದಲ್ಲಿ ಸಂಭವಿಸಿದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಹಾಗೂ ಹತ್ತು ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಪಾಕ್​​ನಲ್ಲಿ ನಡೆಯುತ್ತಿದ್ದ ಮದುವೆ ಮನೆಯಲ್ಲಿ ಬಾಂಬ್​​​​​​ ಸ್ಫೋಟಗೊಂಡಿದೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಕುರೇಶಿ ಮೋರ್ ಸಮೀಪವಿರುವ ಶಾಂತಿ ಸಮಿತಿ (Peace Committee) ನಾಯಕ ನೂರ್ ಆಲಂ ಮೆಹ್ಸೂದ್ ಅವರ ಮನೆಯಲ್ಲಿ ಈ ದಾಳಿ ನಡೆದಿದೆ. ಮದುವೆ ಸಮಾರಂಭದಲ್ಲಿದ್ದ ಮನೆಯವರಿಗೆ ಇದು ಬಿಗ್​​ ಶಾಕ್ ನೀಡಿದೆ. ಈ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದ ಸಮಯದಲ್ಲಿ ದಾಳಿಕೋರ ಆತ್ಮಾಹುತಿ ಮಾಡಿಕೊಳ್ಳುವ ಮೂಲಕ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ವರದಿಗಳ ಪ್ರಕಾರ, ಘಟನೆಯಲ್ಲಿ 7 ಜನರು ಮೃತಪಟ್ಟಿದ್ದಾರೆ ಮತ್ತು 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆರಂಭದಲ್ಲಿ ಸಾವಿನ ಸಂಖ್ಯೆ 5 ಎಂದು ವರದಿಯಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಸಾವಿನ ಸಂಖ್ಯೆ ಏರಿಕೆಯಾಗಿದೆ.

ಸರ್ಕಾರದ ಪರವಾಗಿರುವ ಶಾಂತಿ ಸಮಿತಿ ನಾಯಕನನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಮೃತರಲ್ಲಿ ಶಾಂತಿ ಸಮಿತಿಯ ಮತ್ತೊಬ್ಬ ಪ್ರಮುಖ ನಾಯಕ ವಹೀದುಲ್ಲಾ ಮೆಹ್ಸೂದ್ (ಜಿಗ್ರಿ ಮೆಹ್ಸೂದ್) ಕೂಡ ಸೇರಿದ್ದಾರೆ. ಬಾಂಬ್ ಸ್ಫೋಟದ ತೀವ್ರತೆಗೆ ಮದುವೆ ನಡೆಯುತ್ತಿದ್ದ ಕೊಠಡಿಯ ಛಾವಣಿ ಕುಸಿದು ಬಿದ್ದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಹರಸಾಹಸ ಪಟ್ಟಿವೆ.ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯು ಅಧಿಕೃತವಾಗಿ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಈ ಭಾಗದಲ್ಲಿ ಸಕ್ರಿಯವಾಗಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಈ ಕೃತ್ಯದ ಹಿಂದೆ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗಾಯಾಳುಗಳನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.ಪಾಕಿಸ್ತಾನದ ಅಧಿಕಾರಿಗಳು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆಯು ಆ ಪ್ರದೇಶದಲ್ಲಿ ಮತ್ತೆ ಭಯೋತ್ಪಾದನೆಯ ಕರಿನೆರಳು ಆವರಿಸಿರುವುದನ್ನು ಸಾಬೀತುಪಡಿಸಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಾದ್ಯಂತ, ವಿಶೇಷವಾಗಿ ಡೇರಾ ಇಸ್ಮಾಯಿಲ್ ಖಾನ್ ಮತ್ತು ಪೇಶಾವರ ನಗರಗಳಲ್ಲಿ ‘ಹೈ ಅಲರ್ಟ್’ ಘೋಷಿಸಲಾಗಿದೆ. ಸಾರ್ವಜನಿಕ ಸಮಾರಂಭಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ: Video: ಸಮುದ್ರದಲ್ಲಿ ಮುಳುಗುತ್ತಿದ್ದ ಕಾರಿಂದ ಮಹಿಳೆಯನ್ನು ರಕ್ಷಿಸಿದ ಜನ

ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾಕಿಸ್ತಾನಿ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದಾಳಿಕೋರನಿಗೆ ನೆರವು ನೀಡಿದವರನ್ನು ಪತ್ತೆಹಚ್ಚಲು ಮನೆ-ಮನೆ ತಪಾಸಣೆ ನಡೆಸಲಾಗುತ್ತಿದೆ. ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಟಿಟಿಪಿ (TTP) ಉಗ್ರರು ಗಡಿ ದಾಟಿ ಬರುವ ಸಾಧ್ಯತೆ ಇರುವುದರಿಂದ ಡ್ರೋನ್ ಮೂಲಕ ನಿಗಾ ಇಡಲಾಗುತ್ತಿದೆ.ಸ್ಥಳೀಯ ಆಸ್ಪತ್ರೆಗಳಲ್ಲಿ ‘ಮೆಡಿಕಲ್ ಎಮರ್ಜೆನ್ಸಿ’ ಘೋಷಿಸಲಾಗಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಹೆಚ್ಚಿನ ವೈದ್ಯರನ್ನು ನಿಯೋಜಿಸಲಾಗಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ