
ಬ್ರೆಜಿಲ್, ಅಕ್ಟೋಬರ್ 26: ಇಲ್ಲಿಯ ಜನಪ್ರಿಯ ನಾಯಕ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (Luiz Ignacio Lula da Silva) ಅವರು ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಜಯಭೇರಿ ಭಾರಿಸಿದ್ದಾರೆ. ಈ ಮೂಲಕ 4ನೇ ಬಾರಿಗೆ ಬ್ರೆಜಿಲ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಜಾಗತಿಕ ರಾಜಕೀಯ ಕ್ಷೇತ್ರದಲ್ಲಿ ಅವರ ಈ ಪುನರಾಗಮನವು ಭಾರಿ ಗಮನಸೆಳೆದಿದೆ.
ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೇರ್ ಬೋಲ್ಸೊನಾರೋ ಅವರ ಹಿರಿಯ ಮಗ ಫ್ಲೇವಿಯೋ ಬೋಲ್ಸೊನಾರೋ ವಿರುದ್ಧ ನಡೆದ ನೇರ ಮತ್ತು ಕಠಿಣ ಪೈಪೋಟಿಯಲ್ಲಿ ಲುಲಾ ಡ ಸಿಲ್ವಾ ಅವರು ಶೇ. 51.75 ಮತ ಗಳಿಸಿ ಚುನಾವಣೆ ಜಯಿಸಿದ್ದಾರೆ. ಬೋಲ್ಸೊನಾರೋ ಶೇ. 48.25ರಷ್ಟು ಮತ ಗಳಿಸಿದರು. ಈ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲಿ ಲುಲಾ ಸೋತರೂ ನಂತರ ಕಂಬ್ಯಾಕ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಬ್ರೆಜಿಲ್‌ನ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಾರಿ (4ನೇ ಬಾರಿ) ಪ್ರಜಾಸತ್ತಾತ್ಮಕವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಲುಲಾ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಒಂದೆಡೆ ಮಿಲಿಟರಿ ದಾಳಿಯ ಎಚ್ಚರಿಕೆ, ಮತ್ತೊಂದೆಡೆ ಒಪ್ಪಂದದ ಮಾತು: ಟ್ರಂಪ್ ಮಾತುಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ತಳಮಳ
ಕಾರ್ಮಿಕ ಸಂಘಟನೆಯ ನಾಯಕರಾಗಿದ್ದ ಲುಲಾ, ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ (Bolsa Familia) ಮೂಲಕ ಬ್ರೆಜಿಲ್‌ನ ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದ ಧುರೀಣರಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಬ್ರೆಜಿಲ್ನಲ್ಲಿ ಎಡಪಕ್ಷದ ಆಡಳಿತ ಮುಂದುವರಿಸಿದ್ದಾರೆ.
ಕಠಿಣ ಕಾನೂನು ಸವಾಲುಗಳು, ಜೈಲು ವಾಸ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ಎದುರಿಸಿ, ಮತ್ತೆ ದೇಶದ ಅತ್ಯುನ್ನತ ಹುದ್ದೆಗೆ ಅತ್ಯಂತ ಜನಪ್ರಿಯ ಬೆಂಬಲದೊಂದಿಗೆ ಮರಳಿರುವುದು ಅವರ ರಾಜಕೀಯ ಸೌಧದ ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಮೆಕ್ಕಾ, ಮದೀನಾ ಗುರಿಯಾಗಿಸಿ ದಾಳಿ ಎಂದ ಸೌದಿ ಅರೇಬಿಯಾ: ಆರೋಪ ನಿರಾಕರಿಸಿದ ಹೌತಿಗಳು
ಲ್ಯಾಟಿನ್ ಅಮೆರಿಕ ಭಾಗದ ಬಹುತೇಕ ದೇಶಗಳಲ್ಲಿ ಬಲಪಂಥೀಯರ ನೇತೃತ್ವದ ಸರ್ಕಾರಗಳಿವೆ. ಆದರೆ, ಲುಲಾ ಅವರು ಎಡಪಂಥೀಯ ಪಕ್ಷದ ನಾಯಕರಾಗಿದ್ದಾರೆ. ಅಮೆರಿಕದ ಬಗುಲಲ್ಲೇ ಎರಡು ದಶಕಗಳ ಕಾಲ ಎಡಪಂಥೀಯ ಸರ್ಕಾರ ಸ್ಥಾಪಿಸಿದ್ದಾರೆ. ಈ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ಲೇವಿಯೋ ಬೋಲ್ಸೊನಾರೋ ಅವರನ್ನು ಪೂರ್ಣವಾಗಿ ಬೆಂಬಲಿಸಿದ್ದರು. ಆದರೂ ಕೂಡ ಲೂಲಾ ಗೆಲುವು ಸಾಧಿಸಿರುವುದು ಗಮನಾರ್ಹ ಸಂಗತಿ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ